ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ತಮ್ಮ ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಆಹಾರವನ್ನು ಸಮರ್ಪಕವಾಗಿ ಸೇವಿಸುವ ಮೂಲಕ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ತಡೆಗಟ್ಟಬೇಕು ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಪುಷ್ಪಾವತಿ ಬಿರಾದಾರ ಹೇಳಿದರು.
ತಾಲೂಕಿನ ಹರನಾಳ ಗ್ರಾಮದ ೦೧ನೇ ಅಂಗನವಾಡಿ ಕೇಂದ್ರದಲ್ಲಿ, ಶಿಶು ಅಭಿವೃದ್ಧಿ ಯೋಜನೆ ಸಿಂದಗಿ ಹಾಗೂ ಸ್ನೇಹ ಸಂಸ್ಥೆ–ಐಎಲ್‌ಪಿ ಯೋಜನೆಯ ಸಹಯೋಗದಲ್ಲಿ ಶುಕ್ರವಾರ ಜರುಗಿದ ಪೋಷಣ ಅಭಿಯಾನ ಹಾಗೂ ಪೌಷ್ಟಿಕ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಟಿಕ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಅಂಗನವಾಡಿ ಕೇಂದ್ರಗಳ ಮೂಲಕ ದೊರೆಯುವ ಪೌಷ್ಟಿಕ ಆಹಾರ ಹಾಗೂ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ನೇಹ ಸಂಸ್ಥೆಯ ಸಂಯೋಜಕ ಸಾಗರ ಘಾಟಗೆ ಮಾತನಾಡಿ, ಅಂಗನವಾಡಿ ಕೇಂದ್ರಕ್ಕೆ ಆಗಮಿಸುವ ಮಕ್ಕಳ ಕಲಿಕಾ ಚಟುವಟಿಕೆಗಳು ಉತ್ತಮವಾಗಿವೆ. ಮಕ್ಕಳ ಕಲಿಕೆ, ಆರೋಗ್ಯ, ಪೌಷ್ಟಿಕತೆ ಹಾಗೂ ಸರ್ವಾಂಗೀಣ ಬೆಳವಣಿಗೆಗೆ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಮುದಾಯದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಕ್ಕಳ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ಸಕ್ರಿಯವಾಗಿ ಸಹಕರಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೈ.ಎಸ್.ತಳವಾರ, ಸಂಪನ್ಮೂಲ ವ್ಯಕ್ತಿ ಶ್ರೀಶೈಲ ಜೋಗುರ ಸುಭಾಷ ಬಿರಾದಾರ, ರಾಮನಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ದೀಪಾ ಡಾಂಗೆ, ರಾಜೇಶ್ವರಿ ಶಿವಪುರ, ಗರ್ಭಿಣಿಯರು, ತಾಯಂದಿರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಇದ್ದರು.

