ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದ ಆರಾಧ್ಯ ದೈವ ಮರಡಿಸಿದ್ದೇಶ್ವರ ದೇವಸ್ಥಾನದಲ್ಲಿ ಅ. 11ರಂದು ಘಟಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸತ್ಯಪ್ಪ ವಿಠಪ್ಪ ಪೂಜಾರಿ ಅವರು 11 ದಿನಗಳ ಕಾಲ ಉಪವಾಸ ವ್ರತ ಆಚರಿಸಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ವ್ರತಾಚರಣೆಯಲ್ಲಿರುವ ಪೂಜಾರಿಗೆ ಪ್ರತಿದಿನ ಎಣ್ಣೆ ಮಜ್ಜನ ಹಾಗೂ ರಾತ್ರಿ ಡೊಳ್ಳಿನ ಪದಗಳ ಸೇವೆ ನಡೆಯಲಿದೆ.
ಸ್ವತಃ ಮರಡಿ ಸಿದ್ದೇಶ್ವರ ದೇವರು ದಿ. ಗಿರಮಲ್ಲಪ್ಪ ಕೋಟಿ ಅವರ ಹಿರಿಯ ಮಗಳು ಅಥವಾ ಹಿರಿಯ ಸೊಸೆಯವರ ಸ್ವಪ್ನದಲ್ಲಿ ಕಾಣಿಸಿಕೊಂಡು ವ್ರತಧಾರಿ ಪೂಜಾರಿಗೆ ಹೇಳುತ್ತಾರೆ. ಊರಿನ ಭಕ್ತರ ಮನೆಗಳಲ್ಲಿ ನಡೆಯುವ ಪಳಾರ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳ ಕುರಿತು ಸೂಚನೆ ನೀಡುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ವ್ರತಧಾರಿ ಪೂಜಾರಿ ಹಾಲು ಮತ್ತು ಬಾಳೆಹಣ್ಣು ಮಾತ್ರ ಸೇವಿಸಲಿದ್ದಾರೆ. ಪಾಡ್ಯ ದಿನದಂದು ವರ್ಷದ ಭವಿಷ್ಯ ನುಡಿಗಳು ಹೊರಬೀಳಲಿವೆ. ಸೀಮೋಲ್ಲಂಘನ ಸಂದರ್ಭದಲ್ಲಿ ಭಕ್ತರಿಗೆ ಫಲ-ಪುಷ್ಪ ವಿತರಿಸಲಾಗುವುದು ಎಂದು ದೇವಸ್ಥಾನದ ಧರ್ಮದರ್ಶಿ ಧರೆಪ್ಪ ಯಚ್ಚಿ ತಿಳಿಸಿದ್ದಾರೆ.
