ಮೂಲಸೌಕರ್ಯಗಳ ಕೊರತೆಯಿಂದ ಜನರು ಕಂಗಾಲು | ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಅಫ್ಜಲ್‌ಪುರ: ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ಒಂದು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಜನರು ಕಂಗಾಲಾಗಿದ್ದು, ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೋರ್‌ವೆಲ್ ಸ್ಟಾರ್ಟರ್ ತೆರವು – ನೀರಿನ ಅಭಾವ: ಗ್ರಾಮದಲ್ಲಿ ನೀರಿನ ಸಮಸ್ಯೆಗೆ ಪ್ರಮುಖ ಕಾರಣ ಪಂಚಾಯಿತಿಯ ಎಡವಟ್ಟು. ಗ್ರಾಮದ ಬೋರ್‌ವೆಲ್‌ಗೆ ಅಳವಡಿಸಲಾಗಿದ್ದ ಸ್ಟಾರ್ಟರ್ ಅನ್ನು ಪಂಚಾಯಿತಿ ಸಿಬ್ಬಂದಿ ಕಿತ್ತು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಪರಿಣಾಮವಾಗಿ, ನಿಯಮಿತವಾಗಿ ಸರಬರಾಜಾಗಬೇಕಿದ್ದ ನೀರು ಸಂಪೂರ್ಣ ಸ್ಥಗಿತಗೊಂಡಿದ್ದು, ಜನಸಾಮಾನ್ಯರು ನಿತ್ಯದ ಅಗತ್ಯಗಳಿಗಾಗಿ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಕತ್ತಲಲ್ಲಿ ಗ್ರಾಮ: ಕಳಪೆ ಬೀದಿ ದೀಪಗಳು: ನೀರಿನ ಸಮಸ್ಯೆಯಷ್ಟೇ ಅಲ್ಲದೆ, ಗ್ರಾಮದಲ್ಲಿ ಬೀದಿ ದೀಪಗಳ ವ್ಯವಸ್ಥೆಯೂ ಸಂಪೂರ್ಣ ಹದಗೆಟ್ಟಿದೆ. ಪಂಚಾಯಿತಿಯಿಂದ ಅಳವಡಿಸಲಾದ ಬಲ್ಬ್‌ಗಳು ಕಳಪೆ ಗುಣಮಟ್ಟದ್ದಾಗಿದ್ದು, ಅಳವಡಿಸಿದ ಮರುದಿನವೇ ಕೆಟ್ಟು ನಿಂತಿವೆ. ಇದರಿಂದಾಗಿ ರಾತ್ರಿಯ ವೇಳೆ ಗ್ರಾಮದಲ್ಲಿ ಕತ್ತಲು ಆವರಿಸಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.
ಸಮಸ್ಯೆ ಕುರಿತು ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಇನ್ನಾದರೂ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ತಕ್ಷಣ ಕುಡಿಯುವ ನೀರು ಹಾಗೂ ಬೀದಿ ದೀಪದ ವ್ಯವಸ್ಥೆ ಕಲ್ಪಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
“ನಮ್ಮ ಗ್ರಾಮದಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿವೆ. ಆದರೆ ದಿನನಿತ್ಯದ ಬಳಕೆಯ ನೀರಿಗೂ ಜನ ಪರದಾಡುವಂತಾಗಿದೆ. ಬೋರ್‌ವೆಲ್ ಸ್ಟಾರ್ಟರ್ ಕಿತ್ತು ಬೇರೆ ಕಡೆ ಹಾಕಿದ್ದರಿಂದ ನೀರಿನ ಸರಬರಾಜು ನಿಂತಿದೆ. ಇನ್ನು ಊರಲ್ಲಿ ಬೀದಿ ದೀಪದ ವ್ಯವಸ್ಥೆಯೂ ಇಲ್ಲ, ಹಾಕಿದ ಮರುದಿನವೇ ಬಲ್ಬ್‌ಗಳು ಆಫ್ ಆಗಿವೆ. ಈ ಬಗ್ಗೆ ಪಿಡಿಒ (PDO) ಅವರಿಗೆ ಕರೆ ಮಾಡಿ ದೂರು ನೀಡಿದರೆ, ‘ಆಯ್ತು, ಸರಿ ಮಾಡುತ್ತೇವೆ’ ಎಂದು ಹಾರಿಕೆಯ ಉತ್ತರ ನೀಡಿ ನಂತರ ಫೋನ್ ಎತ್ತುವುದನ್ನೇ ಬಿಡುತ್ತಾರೆ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕುತ್ತೇವೆ. ಅಲ್ಲದೆ, ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಸಮಾನ ಮನಸ್ಕರೆಲ್ಲರೂ ಸೇರಿ ಬಹಿಷ್ಕರಿಸಲು ತೀರ್ಮಾನಿಸುತ್ತೇವೆ.”
– ಸಂತೋಷ ಮದರಿ
ಸ್ಥಳೀಯ ನಿವಾಸಿ, ಚಿಂಚೋಳಿ

