ನಮ್ಮ ಸುತ್ತಲೂ ಅನೇಕ ಜನ ಇರುತ್ತಾರೆ. ಆದರೆ ಕಣ್ಣಲ್ಲಿ ನೀರು ತುಂಬಿದಾಗ ನಮ್ಮ ಕಣ್ಣೀರನ್ನು ಗಮನಿಸುವ ಒಬ್ಬ ವ್ಯಕ್ತಿ, ನಾವು ಸೋತಾಗ “ನಾನು ಇದ್ದೇನೆ” ಎಂದು ಕೈ ಹಿಡಿಯುವ ಒಬ್ಬ ವ್ಯಕ್ತಿ, ನಾವು ತಪ್ಪಿದಾಗ ದ್ವೇಷದಿಂದ ದೂರ ಹೋಗದೆ ಪ್ರೀತಿಯಿಂದ ಸರಿದಾರಿಗೆ ತರುವ ಒಬ್ಬ ವ್ಯಕ್ತಿ—ಇವರೇ ಬದುಕಿನ ನಿಜವಾದ ಸಂಪತ್ತು.
– ಪ್ರಶಾಂತ ಕುಲಕರ್ಣಿ.
ಉಪನ್ಯಾಸಕರು
ಸಿಂದಗಿ – ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಮನುಷ್ಯನ ಬದುಕಿನಲ್ಲಿ ನಡೆಯುವ ಬಹುತೇಕ ಯುದ್ಧಗಳು ಹೊರಗೆ ಆರಂಭವಾಗುವುದಿಲ್ಲ; ಅವು ಮೊದಲು ಮನಸ್ಸಿನಲ್ಲಿ ಆರಂಭವಾಗುತ್ತವೆ. ಒಂದು ಸಣ್ಣ ಅನುಮಾನ, ಒಂದು ತಪ್ಪು ಅರ್ಥೈಸಿಕೊಳ್ಳುವಿಕೆ, ಒಂದು ಕಠಿಣ ಮಾತು, ಒಂದು ಅಹಂಕಾರ—ಇವು ನಿಧಾನವಾಗಿ ಮನಸ್ಸಿನೊಳಗೆ ಗೋಡೆಗಳನ್ನು ಕಟ್ಟುತ್ತವೆ. ಗೋಡೆಗಳು ಎತ್ತರವಾಗುತ್ತಾ ಹೋದಂತೆ ಹತ್ತಿರದವರು ದೂರವಾಗುತ್ತಾರೆ. ಪ್ರೀತಿ ಕಡಿಮೆಯಾದ ಜಾಗದಲ್ಲಿ ದ್ವೇಷ ಬೆಳೆಯುತ್ತದೆ. ನಂಬಿಕೆ ಕಳೆದುಹೋದ ಜಾಗದಲ್ಲಿ ಅನುಮಾನ ಹುಟ್ಟುತ್ತದೆ. ಕೊನೆಗೆ ಧರ್ಮಕ್ಷೇತ್ರವೇ ಕುರುಕ್ಷೇತ್ರವಾಗುತ್ತದೆ.
ನಮ್ಮ ಇತಿಹಾಸದಲ್ಲಿ ಇದಕ್ಕೆ ಎಷ್ಟೋ ಪಾಠಗಳಿವೆ. ನಳಂದ ವಿಶ್ವವಿದ್ಯಾಲಯವನ್ನು ನೆನಪಿಸಿಕೊಂಡರೆ ಭಾರತದ ಜ್ಞಾನ ಪರಂಪರೆಯ ವೈಭವ ಕಣ್ಣ ಮುಂದೆ ಬರುತ್ತದೆ. ಸಾವಿರಾರು ವಿದ್ಯಾರ್ಥಿಗಳು, ಪರಿಣಿತ ಅಧ್ಯಾಪಕರು, ದೂರದ ಪರ್ಷಿಯಾ, ಚೀನಾ, ಬರ್ಮಾದಿಂದಲೂ ಜ್ಞಾನ ಅರಸಿಕೊಂಡು ಬರುತ್ತಿದ್ದ ವಿದ್ಯಾರ್ಥಿಗಳು, ಅಪಾರ ಗ್ರಂಥಸಂಪತ್ತು—ನಳಂದ ಕೇವಲ ವಿಶ್ವವಿದ್ಯಾಲಯವಾಗಿರಲಿಲ್ಲ; ಅದು ಜ್ಞಾನದ ಮಹಾಕೇಂದ್ರವಾಗಿತ್ತು. ಆ ಜ್ಞಾನ ಭಂಡಾರಕ್ಕೆ ಬೆಂಕಿ ತಗುಲಿದಾಗ ಕೇವಲ ಕಟ್ಟಡವೊಂದು ಸುಡಲಿಲ್ಲ; ಭಾರತದ ಜ್ಞಾನಸಂಪತ್ತಿನ ಒಂದು ದೊಡ್ಡ ಅಧ್ಯಾಯವೇ ಭಸ್ಮವಾಯಿತು. ಪುಸ್ತಕಗಳ ಪುಟಗಳನ್ನು ಬೆಂಕಿ ಸುಟ್ಟಿರಬಹುದು; ಆದರೆ ಅಂತಹ ವಿನಾಶದ ಹಿಂದೆ ಹೊತ್ತಿಕೊಂಡಿದ್ದದ್ದು ಮನುಷ್ಯನೊಳಗಿನ ದ್ವೇಷದ ಬೆಂಕಿ. ಹೊರಗಿನ ಬೆಂಕಿ ಒಂದು ಕಟ್ಟಡವನ್ನು ಸುಡುತ್ತದೆ; ಒಳಗಿನ ದ್ವೇಷದ ಬೆಂಕಿ ಸಂಬಂಧಗಳನ್ನು ಸುಡುತ್ತದೆ. ಜ್ಞಾನವನ್ನು ನಾಶಮಾಡುವ ಬೆಂಕಿಗಿಂತ ಮನುಷ್ಯನೊಳಗಿನ ದ್ವೇಷದ ಬೆಂಕಿಯೇ ಹೆಚ್ಚು ಭಯಾನಕ.
ಮಹಾಭಾರತದ ಕಥೆಯಲ್ಲಿಯೂ ಇದೇ ಸತ್ಯ ಕಾಣುತ್ತದೆ. ಧೃತರಾಷ್ಟ್ರನಿಗೆ ನೂರು ಮಕ್ಕಳು. ಪಾಂಡವರೂ ಅವನ ಕುಟುಂಬದವರೇ. ಒಂದೇ ವಂಶ, ಒಂದೇ ರಕ್ತದ ಸಂಬಂಧ. ಎಲ್ಲರೂ ನಮ್ಮವರೇ ಎಂಬ ಭಾವನೆ ಉಳಿದಿದ್ದರೆ ಧರ್ಮಕ್ಷೇತ್ರ ಧರ್ಮಕ್ಷೇತ್ರವಾಗಿಯೇ ಉಳಿಯುತ್ತಿತ್ತು. ಆದರೆ “ಇವರು ಬೇರೆ, ಅವರು ಬೇರೆ” ಎಂಬ ಭಾವನೆ ನಿಧಾನವಾಗಿ ಸಂಬಂಧಗಳ ನಡುವೆ ಗೋಡೆ ಕಟ್ಟಿತು. ಸ್ವಾರ್ಥ, ಅಹಂಕಾರ, ಅಧಿಕಾರದ ಆಸೆ ಮತ್ತು ದ್ವೇಷ ಆ ಗೋಡೆಯನ್ನು ಮತ್ತಷ್ಟು ಗಟ್ಟಿಗೊಳಿಸಿದವು. ಕೊನೆಗೆ ಬಂಧುಗಳೇ ಪರಸ್ಪರ ಎದುರಾಗಿ ನಿಂತರು. ಧರ್ಮಕ್ಷೇತ್ರ ಕುರುಕ್ಷೇತ್ರವಾಯಿತು.
ಮಹಾಭಾರತದ ಈ ಕಥೆ ಹಳೆಯದಾದರೂ ಅದರ ಪಾಠ ಮಾತ್ರ ಪ್ರತಿದಿನ ಹೊಸದಾಗುತ್ತಿದೆ. ಇಂದು ನಮ್ಮ ಮನೆಗಳಲ್ಲಿಯೂ ಸಣ್ಣಸಣ್ಣ ಕಾರಣಗಳಿಗೆ ಸಂಬಂಧಗಳು ಬಿರುಕು ಬಿಡುತ್ತಿವೆ. ಆಸ್ತಿ, ಹಣ, ಅಧಿಕಾರ, ಪ್ರತಿಷ್ಠೆ, ಮಾತಿನ ತಪ್ಪು, ಸಣ್ಣ ಮನಸ್ತಾಪ—ಯಾವುದೋ ಒಂದು ಕಾರಣದಿಂದ ವರ್ಷಗಳ ಸಂಬಂಧಗಳು ದೂರವಾಗುತ್ತಿವೆ. ಒಂದೇ ತಾಯಿಯ ಮಕ್ಕಳು ಅಪರಿಚಿತರಾಗುತ್ತಾರೆ. ಒಂದೇ ಮನೆಯಲ್ಲಿ ವಾಸಿಸುವ ಗಂಡ-ಹೆಂಡತಿ ಮನಸ್ಸಿನಲ್ಲಿ ಬೇರೆಬೇರೆ ಬದುಕು ಆರಂಭಿಸುತ್ತಾರೆ. ತಂದೆ-ತಾಯಿಯ ಪ್ರೀತಿ ಮಕ್ಕಳಿಗೆ ಹಳೆಯದಾಗಿ ಕಾಣುತ್ತದೆ; ಮಕ್ಕಳ ಪ್ರೀತಿ ತಂದೆ-ತಾಯಿಗೆ ಸಮಯದ ಕೊರತೆಯಾಗಿ ಕಾಣುತ್ತದೆ. ಹೀಗೆ ಮನೆ ಉಳಿದರೂ ಮನೆಯೊಳಗಿನ ಆತ್ಮೀಯತೆ ನಿಧಾನವಾಗಿ ಕಡಿಮೆಯಾಗುತ್ತದೆ.
ಸಂಸಾರವೆಂದ ಮೇಲೆ ಭಿನ್ನಾಭಿಪ್ರಾಯಗಳು ಬರಲೇಬೇಕು. ಇಬ್ಬರು ಮನುಷ್ಯರು ಎಂದ ಮೇಲೆ ಅವರ ಆಲೋಚನೆಗಳು ಒಂದೇ ಆಗುವುದಿಲ್ಲ. ಕೆಲವೊಮ್ಮೆ ಮಾತುಗಳು ಭಿನ್ನವಾಗುತ್ತವೆ, ಅಭಿಪ್ರಾಯಗಳು ಬೇರೆಯಾಗುತ್ತವೆ, ದಾರಿಗಳೂ ಬೇರೆ ಆಗಬಹುದು. ಆದರೆ ಮನಸ್ಸುಗಳಲ್ಲಿ ಪ್ರೀತಿ ಉಳಿದಿದ್ದರೆ ಸಂಬಂಧ ಮುರಿಯುವುದಿಲ್ಲ. ಮನೆ ಬೇರೆ ಆಗಬಹುದು; ಮನಸ್ಸು ಬೇರೆ ಆಗಬಾರದು. ಮಾತು ಕಡಿಮೆಯಾಗಬಹುದು; ಮಮತೆ ಕಡಿಮೆಯಾಗಬಾರದು. ದೂರವಿರಬೇಕಾದ ಸಂದರ್ಭ ಬರಬಹುದು; ದ್ವೇಷ ಬೆಳೆಸಿಕೊಳ್ಳುವ ಅಗತ್ಯವಿಲ್ಲ.
ಒಂದು ಕಸಬರಗಿಯನ್ನು ನೋಡಿದರೆ ಅದರಲ್ಲಿರುವ ಪ್ರತಿಯೊಂದು ಕಡ್ಡಿಯೂ ಚಿಕ್ಕದಾಗಿರುತ್ತದೆ. ಒಂದೊಂದು ಕಡ್ಡಿಗೆ ದೊಡ್ಡ ಶಕ್ತಿಯೇನೂ ಇರುವುದಿಲ್ಲ. ಆದರೆ ಅವೆಲ್ಲವೂ ಒಟ್ಟಾಗಿ ಸೇರಿದಾಗ ಕಸವನ್ನು ಗುಡಿಸುವ ಶಕ್ತಿಯಾಗುತ್ತವೆ. ಒಂದು ಕಡ್ಡಿ ಕೆಳಗೆ ಬಿದ್ದರೆ ಅದು ಕಸವಾಗುತ್ತದೆ. ಕುಟುಂಬವೂ ಹಾಗೆಯೇ. ಒಟ್ಟಾಗಿ ನಿಂತಾಗ ಕುಟುಂಬ ಶಕ್ತಿ; ಒಬ್ಬರನ್ನೊಬ್ಬರು ಹಿಡಿದು ನಿಲ್ಲಿಸಿದಾಗ ಕುಟುಂಬ ಆಶ್ರಯ. ಸಂಬಂಧಗಳು ಒಟ್ಟಾಗಿ ಉಳಿದಾಗಲೇ ಮನೆಗೆ ಮನೆಯ ಸೌಂದರ್ಯ ಬರುತ್ತದೆ.

ಇಂದು ನಾವು ಮನೆ ಕಟ್ಟಲು ಬಹಳ ಹಣ ಖರ್ಚು ಮಾಡುತ್ತೇವೆ. ದೊಡ್ಡ ಕೋಣೆಗಳು, ವಿಶಾಲ ಅಡುಗೆಮನೆ, ಓಪನ್ ಕಿಚನ್, ಸುಂದರ ಪೀಠೋಪಕರಣಗಳು, ವಿದೇಶಿ ಅಲಂಕಾರಿಕ ವಸ್ತುಗಳು—ಎಲ್ಲವನ್ನೂ ತುಂಬಿಸುತ್ತೇವೆ. ಮನೆ ಸುಂದರವಾಗುತ್ತದೆ. ಆದರೆ ಮನುಷ್ಯರ ಮನಸ್ಸುಗಳಲ್ಲಿ ಪ್ರೀತಿ ಇಲ್ಲದಿದ್ದರೆ ಆ ಸೌಂದರ್ಯ ಅಪೂರ್ಣ. ದೊಡ್ಡ ಮನೆ ಇದ್ದರೂ ಒಬ್ಬರೊಂದಿಗೆ ಮತ್ತೊಬ್ಬರು ಮಾತನಾಡದಿದ್ದರೆ ಅದು ಕೇವಲ ಕಟ್ಟಡ. ಊಟದ ಮೇಜು ದೊಡ್ಡದಿದ್ದರೂ ಅದರ ಸುತ್ತ ಕುಟುಂಬದವರು ಕೂತು ನಗದಿದ್ದರೆ ಆ ಮೇಜಿನ ಸೌಂದರ್ಯವೇನು? ಮನೆಯ ಗೋಡೆಗಳು ದುಬಾರಿಯಾಗಿರಬಹುದು; ಆದರೆ ಮನೆಯೊಳಗಿನ ನಗು ಉಚಿತವಾಗಿರುತ್ತದೆ. ಆ ನಗುವೇ ಮನೆಯ ನಿಜವಾದ ಅಲಂಕಾರ.
ಇಂದಿನ ಬದುಕಿನ ಮತ್ತೊಂದು ವಿಚಿತ್ರತೆ ಎಂದರೆ, ಮನೆಗಳು ತಂತ್ರಜ್ಞಾನದಿಂದ ಸಂಪರ್ಕಗೊಂಡಿವೆ; ಆದರೆ ಮನಸ್ಸುಗಳು ದೂರವಾಗುತ್ತಿವೆ. ಒಂದೇ ಮನೆಯಲ್ಲಿ ಕುಳಿತಿರುವ ನಾಲ್ಕು ಜನರು ನಾಲ್ಕು ಮೊಬೈಲ್‌ಗಳಲ್ಲಿ ನಾಲ್ಕು ಲೋಕಗಳಲ್ಲಿ ಬದುಕುತ್ತಿದ್ದಾರೆ. ಮಾತುಕತೆಗೆ ಸಮಯ ಕಡಿಮೆಯಾಗುತ್ತಿದೆ. ಒಬ್ಬರ ಮುಖವನ್ನು ನೋಡುವುದಕ್ಕಿಂತ ಪರದೆಯನ್ನು ನೋಡುವ ಸಮಯ ಹೆಚ್ಚಾಗಿದೆ. ಆದರೆ ಮನುಷ್ಯನಿಗೆ ಬೇಕಾಗಿರುವುದು ಕೇವಲ ಸಂಪರ್ಕವಲ್ಲ; ಆತ್ಮೀಯತೆ. Wi-Fi ಮನಸ್ಸುಗಳನ್ನು ಜೋಡಿಸುವುದಿಲ್ಲ. ಒಂದು ಪ್ರೀತಿಯ ಮಾತು ಮಾತ್ರ ಕೆಲವೊಮ್ಮೆ ವರ್ಷಗಳ ದೂರವನ್ನು ಕಡಿಮೆ ಮಾಡುತ್ತದೆ.
ನಾವು ಆಕಾಶದಲ್ಲಿರುವ ಗ್ರಹಗಳನ್ನು ನಂಬುತ್ತೇವೆ. ಆದರೆ ನಮ್ಮ ಪಕ್ಕದಲ್ಲಿರುವ ಮನುಷ್ಯನ ಮೇಲೆ ನಂಬಿಕೆ ಇಡುವುದನ್ನು ಕೆಲವೊಮ್ಮೆ ಮರೆತುಬಿಡುತ್ತೇವೆ. ಸಂಬಂಧಗಳ ನೆಲೆ ನಂಬಿಕೆ. ನಂಬಿಕೆ ಇರುವಲ್ಲಿ ಕ್ಷಮೆ ಇರುತ್ತದೆ. ಕ್ಷಮೆ ಇರುವಲ್ಲಿ ಪ್ರೀತಿ ಉಳಿಯುತ್ತದೆ. ಪ್ರೀತಿ ಉಳಿದಲ್ಲಿ ಮನೆಯೊಳಗೆ ಎಷ್ಟೇ ಸಣ್ಣ ಜಗಳ ಬಂದರೂ ಅದು ಯುದ್ಧವಾಗುವುದಿಲ್ಲ; ಎಷ್ಟೇ ದೊಡ್ಡ ಸಮಸ್ಯೆ ಬಂದರೂ ಅದು ಕುಟುಂಬವನ್ನು ಸಂಪೂರ್ಣವಾಗಿ ಒಡೆಯುವುದಿಲ್ಲ.
ರಾಮಾಯಣವೂ ನಮಗೆ ಇದೇ ಪಾಠವನ್ನು ಹೇಳುತ್ತದೆ. ರಾವಣನಿಗೆ ಅಪಾರ ಶಕ್ತಿ ಇತ್ತು. ಜ್ಞಾನವಿತ್ತು. ಸಾಮ್ರಾಜ್ಯವಿತ್ತು. ಸಂಪತ್ತು ಇತ್ತು. ಆದರೆ ಸಂಕಷ್ಟದ ಸಮಯದಲ್ಲಿ ಅವನ ತಮ್ಮ ವಿಭೀಷಣ ಅವನಿಂದ ದೂರವಾದ. ರಾಮನ ಬಳಿ ಲಂಕೆಯಂತಹ ಸಾಮ್ರಾಜ್ಯ ಇರಲಿಲ್ಲ; ಆದರೆ ಕಷ್ಟದ ಸಮಯದಲ್ಲಿ ಲಕ್ಷ್ಮಣ ಅವನ ಜೊತೆಯಲ್ಲಿದ್ದ. ಹನುಮಂತನಂತಹ ನಿಷ್ಠಾವಂತ ಸಹಾಯಕನಿದ್ದ. ಸುಗ್ರೀವನಂತಹ ಸ್ನೇಹಿತನಿದ್ದ. ಬದುಕಿನಲ್ಲಿ ನಮ್ಮ ಸುತ್ತಲಿರುವ ಜನರ ಸಂಖ್ಯೆ ಮುಖ್ಯವಲ್ಲ; ಕಷ್ಟ ಬಂದಾಗ ನಮ್ಮ ಪಕ್ಕದಲ್ಲಿ ನಿಲ್ಲುವ ಹೃದಯಗಳೇ ಮುಖ್ಯ.
ಸುಖದಲ್ಲಿರುವಾಗ ನಮ್ಮ ಸುತ್ತಲೂ ಅನೇಕ ಜನ ಇರುತ್ತಾರೆ. ಆದರೆ ಕಣ್ಣಲ್ಲಿ ನೀರು ತುಂಬಿದಾಗ ನಮ್ಮ ಕಣ್ಣೀರನ್ನು ಗಮನಿಸುವ ಒಬ್ಬ ವ್ಯಕ್ತಿ, ನಾವು ಸೋತಾಗ “ನಾನು ಇದ್ದೇನೆ” ಎಂದು ಕೈ ಹಿಡಿಯುವ ಒಬ್ಬ ವ್ಯಕ್ತಿ, ನಾವು ತಪ್ಪಿದಾಗ ದ್ವೇಷದಿಂದ ದೂರ ಹೋಗದೆ ಪ್ರೀತಿಯಿಂದ ಸರಿದಾರಿಗೆ ತರುವ ಒಬ್ಬ ವ್ಯಕ್ತಿ—ಇವರೇ ಬದುಕಿನ ನಿಜವಾದ ಸಂಪತ್ತು. ಅಂತಹ ಸಂಬಂಧಗಳಿರುವ ಮನೆ ಚಿಕ್ಕದಾಗಿದ್ದರೂ ದೊಡ್ಡದಾಗಿರುತ್ತದೆ.

ಇದೇ ಮಾತು ದೇವರ ಭಕ್ತಿಗೂ ಅನ್ವಯಿಸುತ್ತದೆ. ನಾವು ದೇವರಿಗೆ ಅಭಿಷೇಕ ಮಾಡುತ್ತೇವೆ, ತುಪ್ಪದ ದೀಪ ಹಚ್ಚುತ್ತೇವೆ, ಹೂವು ಅರ್ಪಿಸುತ್ತೇವೆ, ನೈವೇದ್ಯ ಇಡುತ್ತೇವೆ. ಇವೆಲ್ಲವೂ ನಮ್ಮ ಭಕ್ತಿಯ ಅಭಿವ್ಯಕ್ತಿಗಳು. ಆದರೆ ದೇವರಿಗೆ ಇಷ್ಟವಾಗುವುದು ಕೇವಲ ಹೊರಗಿನ ಆಚರಣೆಗಳಲ್ಲ; ಒಳಗಿನ ಭಾವನೆ. ಸಪ್ತಸಾಗರಗಳನ್ನು ಸೃಷ್ಟಿಸಿದವನಿಗೆ ನಾವು ಸುರಿಸುವ ಕೆಲವು ಕೊಡ ನೀರಿನ ಕೊರತೆಯೇನು? ಸೂರ್ಯ-ಚಂದ್ರರನ್ನೇ ಸೃಷ್ಟಿಸಿದವನಿಗೆ ನಮ್ಮ ತುಪ್ಪದ ದೀಪದ ಬೆಳಕಿನ ಅಗತ್ಯವೇನು? ಸಕಲ ಜೀವರಾಶಿಗಳಿಗೆ ಅನ್ನ ನೀಡುತ್ತಿರುವವನಿಗೆ ನಾವು ಇಡುವ ನೈವೇದ್ಯದ ಕೊರತೆಯೇನು?
ದೇವರಿಗೆ ನಾವು ಕೊಡುವ ದೊಡ್ಡ ನೈವೇದ್ಯವೆಂದರೆ ಪ್ರೀತಿಯ ಹೃದಯ. ದೇವರಿಗೆ ಅರ್ಪಿಸುವ ದೊಡ್ಡ ಹೂವೆಂದರೆ ಕರುಣೆ. ಹಚ್ಚುವ ದೊಡ್ಡ ದೀಪವೆಂದರೆ ಇನ್ನೊಬ್ಬರ ಬದುಕಿನಲ್ಲಿ ಬೆಳಕು ಮೂಡಿಸುವ ಒಳ್ಳೆಯತನ. ದೇವಾಲಯದಲ್ಲಿ ತಲೆಬಾಗುವುದರ ಜೊತೆಗೆ ಮನೆಯಲ್ಲಿ ಹಿರಿಯರ ಮುಂದೆ ಗೌರವದಿಂದ ತಲೆಬಾಗುವುದು, ದೇವರಿಗೆ ಹೂ ಅರ್ಪಿಸುವುದರ ಜೊತೆಗೆ ಒಬ್ಬರ ಮನಸ್ಸಿಗೆ ಸಂತೋಷ ನೀಡುವುದು, ದೇವರಿಗೆ ನೈವೇದ್ಯ ಇಡುವುದರ ಜೊತೆಗೆ ಹಸಿದವನಿಗೆ ಅನ್ನ ನೀಡುವುದು—ಇವೆಲ್ಲವೂ ಭಕ್ತಿಯ ಬದುಕಿನ ರೂಪಗಳೇ.
ಯಾರ ಹೃದಯದಲ್ಲಿ ಪ್ರೀತಿ ಇದೆಯೋ, ಕರುಣೆ ಇದೆಯೋ, ಕ್ಷಮೆ ಇದೆಯೋ, ಮಾನವೀಯತೆ ಇದೆಯೋ—ಅಲ್ಲಿಯೇ ದೇವರ ವಾಸ. ಆದ್ದರಿಂದ ಮನೆ ದೊಡ್ಡದಾಗಬೇಕಿಲ್ಲ; ಹೃದಯ ದೊಡ್ಡದಾಗಬೇಕು. ಮನೆಯಲ್ಲಿ ವಸ್ತುಗಳು ಹೆಚ್ಚಾಗಬೇಕಿಲ್ಲ; ಆತ್ಮೀಯತೆ ಹೆಚ್ಚಾಗಬೇಕು. ಗೋಡೆಗಳು ಎತ್ತರವಾಗಬೇಕಿಲ್ಲ; ಸಂಬಂಧಗಳು ಗಟ್ಟಿಯಾಗಬೇಕು. ಸಂಪತ್ತು ಹೆಚ್ಚಾಗಬೇಕಿಲ್ಲ; ಸಂತೋಷ ಹಂಚಿಕೊಳ್ಳುವ ಮನಸ್ಸು ಹೆಚ್ಚಾಗಬೇಕು.
ಒಂದು ದಿನ ನಾವು ಕಟ್ಟಿದ ಮನೆ ಉಳಿಯಬಹುದು, ಆದರೆ ನಾವು ಅದರೊಳಗೆ ಇರುವುದಿಲ್ಲ. ನಾವು ಸಂಗ್ರಹಿಸಿದ ವಸ್ತುಗಳು ಉಳಿಯಬಹುದು, ಆದರೆ ಅವುಗಳನ್ನು ಅನುಭವಿಸಲು ನಾವು ಇರುವುದಿಲ್ಲ. ನಮ್ಮ ಹೆಸರಿನ ಫಲಕ ಉಳಿಯಬಹುದು, ಆದರೆ ನಮ್ಮ ಧ್ವನಿ ಇರುವುದಿಲ್ಲ. ಉಳಿಯುವುದು ನಾವು ಯಾರ ಹೃದಯದಲ್ಲಿ ಪ್ರೀತಿಯಾಗಿ ಬದುಕಿದ್ದೇವೆ ಎಂಬ ನೆನಪು ಮಾತ್ರ. ಆದ್ದರಿಂದ ಬದುಕಿರುವಾಗಲೇ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕು. ಮಾತು ತಪ್ಪಿದರೆ ಕ್ಷಮೆ ಕೇಳಬೇಕು. ಮನಸ್ಸು ನೋಯಿಸಿದರೆ ಸಮಾಧಾನಪಡಿಸಬೇಕು. ದೂರವಾದವರನ್ನು ಸಾಧ್ಯವಾದಷ್ಟು ಹತ್ತಿರಕ್ಕೆ ತರಬೇಕು. ಏಕೆಂದರೆ ಕೆಲವೊಂದು ಸಂಬಂಧಗಳು ಕಳೆದುಹೋದ ಮೇಲೆ ಮರಳಿ ಸಿಗುವುದಿಲ್ಲ.
ಬದುಕು ಬಹಳ ಚಿಕ್ಕದು. ನಿನ್ನೆ ನಮ್ಮ ಜೊತೆ ಇದ್ದ ಕೆಲವರು ಇಂದು ನಮ್ಮ ಜೊತೆ ಇಲ್ಲ. ನಾಳೆ ನಾವು ಯಾರ ಜೊತೆ ಇರುತ್ತೇವೆ ಎಂಬುದೂ ನಮಗೆ ಗೊತ್ತಿಲ್ಲ. ಹಾಗಿರುವಾಗ ಸಣ್ಣಸಣ್ಣ ವಿಷಯಗಳನ್ನು ದೊಡ್ಡದಾಗಿಸಿಕೊಂಡು ಸಂಬಂಧಗಳನ್ನು ಕಳೆದುಕೊಳ್ಳುವುದರಲ್ಲಿ ಅರ್ಥವೇನು? ಗೆದ್ದರೂ ಯಾರನ್ನಾದರೂ ಕಳೆದುಕೊಳ್ಳಬೇಕಾದ ಗೆಲುವಿಗಿಂತ, ಸ್ವಲ್ಪ ಬಿಟ್ಟುಕೊಟ್ಟು ಎಲ್ಲರನ್ನೂ ಉಳಿಸಿಕೊಳ್ಳುವ ಬದುಕು ಎಷ್ಟೋ ಸುಂದರ.
ಆದ್ದರಿಂದ ನಮ್ಮ ಮನೆಗಳಲ್ಲಿ ಒಂದು ಸಣ್ಣ ಬದಲಾವಣೆ ಸಾಕು—“ನಾನು” ಎನ್ನುವ ಪದ ಸ್ವಲ್ಪ ಕಡಿಮೆಯಾಗಲಿ; “ನಾವು” ಎನ್ನುವ ಪದ ಸ್ವಲ್ಪ ಹೆಚ್ಚಾಗಲಿ. “ನನ್ನದು” ಎನ್ನುವುದಕ್ಕಿಂತ “ನಮ್ಮದು” ಎನ್ನುವ ಭಾವನೆ ಬೆಳೆಯಲಿ. ಅಹಂಕಾರ ಸ್ವಲ್ಪ ಹಿಂದೆ ಸರಿಯಲಿ; ಪ್ರೀತಿ ಸ್ವಲ್ಪ ಮುಂದೆ ಬರಲಿ. ಆಗ ಮನೆಯ ಗೋಡೆಗಳಿಗೂ ಒಂದು ಉಷ್ಣತೆ ಬರುತ್ತದೆ. ಮಾತುಗಳಿಗೂ ಒಂದು ಸಿಹಿ ಬರುತ್ತದೆ. ಊಟಕ್ಕೂ ಒಂದು ರುಚಿ ಬರುತ್ತದೆ. ಬದುಕಿಗೂ ಒಂದು ಅರ್ಥ ಬರುತ್ತದೆ.
ಕೊನೆಗೆ ಮನೆ ಎಂದರೆ ನಾಲ್ಕು ಗೋಡೆಗಳಲ್ಲ. ಮನೆ ಎಂದರೆ ನಮ್ಮ ಬರುವಿಕೆಯನ್ನು ಕಾಯುವ ಕಣ್ಣುಗಳು, ನಮ್ಮ ನೋವನ್ನು ಅರ್ಥಮಾಡಿಕೊಳ್ಳುವ ಹೃದಯಗಳು, ನಮ್ಮ ತಪ್ಪನ್ನು ಕ್ಷಮಿಸುವ ಮನಸ್ಸುಗಳು, ನಮ್ಮ ಸಂತೋಷದಲ್ಲಿ ನಗುವವರು, ನಮ್ಮ ಕಷ್ಟದಲ್ಲಿ ಕೈ ಹಿಡಿಯುವವರು. ಅಂತಹ ಮನೆಯಲ್ಲಿ ಬಡತನವಿದ್ದರೂ ನೆಮ್ಮದಿ ಇರುತ್ತದೆ. ಚಿಕ್ಕ ಕೋಣೆಯಿದ್ದರೂ ವಿಶಾಲವಾದ ಪ್ರೀತಿ ಇರುತ್ತದೆ. ಕಡಿಮೆ ವಸ್ತುಗಳಿದ್ದರೂ ತುಂಬಿದ ಬದುಕಿರುತ್ತದೆ.
ಮನೆ ಧರ್ಮಕ್ಷೇತ್ರವಾಗಿರಲಿ; ಕುರುಕ್ಷೇತ್ರವಾಗಬಾರದು.
ಮನಸ್ಸುಗಳಲ್ಲಿ ಪ್ರೀತಿ ಇರಲಿ; ದ್ವೇಷಕ್ಕೆ ಜಾಗವಿರಬಾರದು.
ಸಂಬಂಧಗಳಲ್ಲಿ ನಂಬಿಕೆ ಇರಲಿ; ಅನುಮಾನಕ್ಕೆ ನೆಲೆ ಸಿಗಬಾರದು.
ಯಾಕೆಂದರೆ ಕೊನೆಗೆ ನಮ್ಮ ಬದುಕಿನ ದೊಡ್ಡ ಸಂಪತ್ತು ನಾವು ಕಟ್ಟಿದ ಮನೆ ಅಲ್ಲ… ನಾವು ಕಾಪಾಡಿದ ಸಂಬಂಧಗಳು. ನಾವು ಗಳಿಸಿದ ಹಣವಲ್ಲ… ನಾವು ಹಂಚಿದ ಪ್ರೀತಿ. ನಾವು ಪಡೆದ ಗೌರವವಲ್ಲ… ನಮ್ಮನ್ನು ನೆನೆದು ಯಾರಾದರೂ ಕಣ್ಣಲ್ಲಿ ಮೂಡುವ ಒಂದು ಹನಿ ಕಣ್ಣೀರು.
ಧರ್ಮಕ್ಷೇತ್ರವನ್ನು ಕುರುಕ್ಷೇತ್ರವಾಗದಂತೆ ಕಾಪಾಡುವ ಶಕ್ತಿ ನಮ್ಮ ಕೈಯಲ್ಲೇ ಇದೆ—ಅದು ಪ್ರೀತಿ.


