ವಿಜಯಪುರ ಎಸಿ ಗುರುನಾಥ ದಡ್ಡೆ ಅವರಿಗೆ ಬೀಳ್ಕೊಡುಗೆ, ನೂತನ ಎಸಿ ಜುಫಿಶಾನ್ ಹಕ್ ರಿಗೆ ಸ್ವಾಗತ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರು ಒಂದು ತಂಡವಾಗಿ ಕಾರ್ಯ ನಿರ್ವಹಿಸಿದ್ದಾರೆ. ದೂರದೃಷ್ಟಿ ಹಾಗೂ ಆಸಕ್ತಿಯಿಂದ ಕಾರ್ಯ ನಿರ್ವಹಿಸುವ ಮೂಲಕ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.
ನಗರದ ಗಾಂಧಿ ಭವನದಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಹಾಗೂ ಹೊಸ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್ ಅವರಿಗೆ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೂತನ ಎಸಿ ಜುಫಿಶಾನ್ ಅವರು ಕಾರವಾರದಲ್ಲಿ ಪ್ರೊಬೇಷನರ್ ಅಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಒಂದು ತಂಡ ಹಾಗೂ ಕುಟುಂಬವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿ ಇಲಾಖೆಯಾಗಿದ್ದು, ಜನರ ಒಳಿತಿಗಾಗಿ ಕಾರ್ಯ ನಿರ್ವಹಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ವಿಜಯಪುರ ಉಪವಿಭಾಗದ ನೂತನ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಜುಫಿಶಾನ್ ಹಕ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಇದೇ ವೇಳೆ ವರ್ಗಾವಣೆಗೊಂಡು ತೆರಳುತ್ತಿರುವ ನಿರ್ಗಮಿತ ಎಸಿ ಗುರುನಾಥ ದಡ್ಡೆ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಎಸಿ ಗುರುನಾಥ ದಡ್ಡೆ ಅವರು ಮಾತನಾಡಿ, ತಾವು ಈ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ತಮ್ಮ ಕರ್ತವ್ಯದ ಅವಧಿಯಲ್ಲಿ ಬಹಳಷ್ಟು ಕಲಿಯಲು ಅವಕಾಶ ಸಿಕ್ಕಿದೆ. ತಮಗೆ ಎಲ್ಲರೂ ಸಹಕಾರ ನೀಡಿದ್ದಾರೆ. ಎಲ್ಲ ವಿಷಯವನ್ನು ಕಲಿಯುವ ಅವಕಾಶ ದೊರೆತಿರುವುದು ಮರೆಯಲಾರದ ಸಂಗತಿ ಎನ್ನುವ ಮೂಲಕ ಜಿಲ್ಲೆಯಲ್ಲಿ ಕಾರ್ಯನಿರ್ವಹಣೆ ಕುರಿತು ಸವಿಸ್ತಾರವಾಗಿ ಹಂಚಿಕೊಂಡರು.
ನೂತನ ಉಪ ವಿಭಾಗಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಜುಫಿಶಾನ್ ಹಕ್ ಅವರು ಮಾತನಾಡಿ, ಜಿಲ್ಲೆಯ ಒಳಿತಿಗಾಗಿ ಎಲ್ಲರೂ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸೋಣ ಎಂದರು.
ಬಸವನ ಬಾಗೇವಾಡಿ ತಹಶೀಲ್ದಾರರಾದ ಸೋಮನಕಟ್ಟೆ, ತಹಶೀಲ್ದಾರ ಎ.ಡಿ. ಅಮರವಾಡಗಿ, ತಹಶೀಲ್ದಾರ್ ಸುರೇಶ ಚವಲಾರ ಮಾತನಾಡಿ, ಕಂದಾಯ ಇಲಾಖೆಯಲ್ಲಿ ತಮ್ಮ ಮೃದು ಸ್ವಭಾವ ಹಾಗೂ ಸೌಮ್ಯ ನಡೆಯಿಂದ ಪ್ರತಿಯೊಬ್ಬರ ಮನಗೆದ್ದಿದ್ದ ದಡ್ಡೆ ಅವರು, ಸಾರ್ವಜನಿಕರೊಂದಿಗೆ ಅತ್ಯುತ್ತಮ ಸಂವಹನ ಸಾಧಿಸಿ ಜನಾನುರಾಗಿ ಆಡಳಿತ ನೀಡಿದ್ದಾರೆ ಎಂದರು.
ಯುವ ಸಬಲೀಕರಣ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಮಾತನಾಡಿ, ಎಸಿ ಗುರುನಾಥ ದಡ್ಡೆ ಅವರು, ಹೃದಯವಂತಿಕೆಯ ಅಧಿಕಾರಿಯಾಗಿ ತಮ್ಮ ಜವಾಬ್ದಾರಿಯಿಂದ ಸೇವೆ ಸಲ್ಲಿಸಿದ್ದಾರೆ. ಎಲ್ಲರನ್ನೂ ವಿಶ್ವಾಸದಿಂದ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ತಹಶೀಲ್ದಾರ ಸಂತೋಷ ಮ್ಯಾಗೇರಿ ಹಾಗೂ ತಹಶೀಲ್ದಾರ ಪ್ರಶಾಂತ ಚನಗಿಂಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು, ನೂತನ ಎಸಿ ಅವರನ್ನು ಗೌರವಿಸಿದರು. ನಿರ್ಗಮಿತ ಎಸಿ ಗುರುನಾಥ ದಡ್ಡೆ ಅವರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಟ್ಟರು.

