ಯಡ್ರಾಮಿ: ೧೨ನೇ ಶತಮಾನದಲ್ಲಿ ಸಮ ಸಮಾಜಕ್ಕಾಗಿ ವಚನ ಚಳುವಳಿ ಹುಟ್ಟಿಕೊಂಡರೆ ೧೫ ನೇ ಶತಮಾನದಲ್ಲಿನ ವೇಮನಾರಾಧ್ಯರ ಸಾಹಿತ್ಯ ಮೋಕ್ಷ ಪ್ರಾಪ್ತಿಯನ್ನು ಹಂಬಲಿಸುವ ತ್ರಿಪದಿಗಳಾಗಿವೆ ಎಂದು ಸಾಹಿತಿ-ಸಂಶೋಧಕ ನಿಂಗನೌಡ ದೇಸಾಯಿ ಹೇಳಿದರು.
ಪಟ್ಟಣದ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ಶ್ರೀ ಮುರಘೇಂದ್ರ ಶಿವಯೋಗಿ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಆನ್ಲೈನ್ ಹುಣ್ಣಿಮೆ ಕಾರ‍್ಯಕ್ರಮ (ಸಂಗಮ-೫೩)ದಲ್ಲಿ “ಬಸವಣ್ಣ ಮತ್ತು ವೇಮನ ವಚನಗಳ ಸಾಮ್ಯತೆ” ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಬಸವಣ್ಣ ಮತ್ತು ವೇಮನರ ಬದುಕಿನಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣುತ್ತೇವೆ. ಆದರೆ ಇಬ್ಬರು ಮಹಾನ್‌ಪುರುಷರು ರಚನೆ ಮಾಡಿದ ಸಾಹಿತ್ಯದಲ್ಲಿನ ತತ್ವಗಳ ಸಾಮ್ಯತೆ ಗುರುತಿಸಬಹುದಾಗಿದೆ. ಬಸವಣ್ಣನವರು ಸಮಾಜ ಸುಧಾರಕರಾಗಿ ಸಮಾನತೆಗಾಗಿ ಅತಿದೊಡ್ಡ ಚಳುವಳಿಗೆ ನಾಂದಿ ಹಾಡಿದರು. ವೇಮನ ಮೂಲತಃ ಆಂಧ್ರ ನಾಡಿನವರಾಗಿದ್ದು, ಪ್ರಾರಂಭದಲ್ಲಿ ವೇಮನರು ಭೋಗಾದಿ ಜೀವನಕ್ಕೆ ಅಂಟಿಕೊಂಡಿದ್ದರೂ ಮುಂದೆ ಮನಸ್ಸು ಪರಿವರ್ತನೆ ಮಾಡಿಕೊಂಡು ಆಧ್ಯಾತ್ಮದತ್ತ ಒಲವು ಬೆಳೆಸಿಕೊಳ್ಳುವ ಮೂಲಕ ಅನುಭಾವ ಸಾಹಿತ್ಯದ ರಚನೆಯಲ್ಲಿ ತೊಡಗಿಸಿಕೊಂಡರು. ವೇಮನರು ೩೮೧೩ ಅನುಭಾವದ ತ್ರಿಪದಿಗಳನ್ನು ರಚಿಸದ್ದಾರೆ. ಬಸವಣ್ಣವರ ವಚನಗಳು ಮುಖ್ಯವಾಗಿ ಸಾಮಾಜಿಕ ಸಮಾನತೆ, ಕಾಯಕ, ದಾಸೋಹ ತತ್ವ ತಿಳಿಸಿದರೆ, ವೇಮನಾರಾಧ್ಯರ ವಚನಗಳ ಶೈಲಿಯ ತ್ರಿಪದಿ ಸಾಹಿತ್ಯ ಬಹುತೇಕ ಮೋಕ್ಷವನ್ನು ಹಂಬಲಿಸುವಂತವುಗಳಾಗಿವೆ. ಆದರೂ ವೇಮನರ ಸಾಹಿತ್ಯದಲ್ಲಿಯೂ ಗುರು,ಲಿಂಗ, ಜಂಗಮ, ಇತ್ಯಾದಿ ವಿಷಯಗಳಲ್ಲಿ ಬಸವಣ್ಣನವರ ವಚನಗಳಲ್ಲಿನ ತತ್ವಗಳಲ್ಲಿ ಸಾಮ್ಯತೆ ಸಾಮಾನ್ಯವಾಗಿ ಗುರುತಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ‍್ಯಕ್ರಮದ ಸಾನಿಧ್ಯವನ್ನು ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ವಹಿಸಿದ್ದರು. ಸಂಗಮದ ಕಾರ‍್ಯದರ್ಶಿ ಪ್ರಕಾಶ ಸಾಹು ಬೆಲ್ಲದ, ಲಕ್ಷ್ಮೀಕಾಂತ ಸೋನಾರ, ಪತ್ರಕರ್ತ ವಿಜಯೇಂದ್ರ ಕುಲಕರ್ಣಿ, ಸಾಹಿತಿ ನರಸಿಂಗರಾವ ಹೇಮನೂರ, ಸಿಪಿಐ ಅಲೀಸಾಬ ಬಾಗವಾನ, ಸದಾಶಿವ ಪತ್ತಾರ, ಶರಣಕುಮಾರ ಮಹೇಶ, ಸಿದ್ರಾಮಪ್ಪ ನವಲಗುಂದ, ಪರಮೇಶ್ವರ, ಸುರೇಶ ಪತ್ತಾರ, ಬಸವರಾಜ ಬಡಿಗೇರ, ಎಸ್.ಎಸ್. ಹೆಬ್ಬಾಳ, ವೀರಭದ್ರ ಪತ್ತಾರ, ಆರ್.ಜಿ. ಪುರಾಣಿಕ, ಪ್ರಶಾಂತ ಕುನ್ನೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಂತೋಷ ನವಲಗುಂದ ನಿರೂಪಿಸಿ, ವಂದಿಸಿದರು.
Related Posts
Add A Comment