ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತೀಚೆಗೆ ನಡೆದ ದರೋಡೆ ಸಂದರ್ಭದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ
ಬೆಂಗಳೂರಿನಲ್ಲಿ ಮೃತಪಟ್ಟ ಸಂತೋಷ ಕನ್ನಾಳ ಅವರ ನಿಧನಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂತೋಷ ಕನ್ನಾಳ ಅವರ ಮೃತಪಟ್ಟಿರುವುದು ಬಹಳ ದುರದೃಷ್ಟಕರವಾಗಿದೆ. ಹಳ್ಳಿಯಿಂದ ಬಂದು ನಗರದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ ಅವರು ಈ ರೀತಿ ನಿಧನರಾಗಿರುವುದು ಅತೀವ ದುಃಖ ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಸಚಿವರು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಅವರಿಂದ ಈ ಬಗ್ಗೆ ಪಡೆದಿದ್ದಾರೆ. ಅಲ್ಲದೇ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ ಮೃತರ ಮರಣೋತ್ತರ ಪರೀಕ್ಷೆ ಮಾಡಿಸಲು ಮತ್ತು ನಂತರ ಪಾರ್ಥಿವ ಶರೀರವನ್ನು ವಿಜಯಪುರ ಜಿಲ್ಲೆಯ ಸ್ವಗ್ರಾಮ ದಿಂಡವಾರಕ್ಕೆ ತಲುಪಿಸಲು ವಾಹನ ವ್ಯವಸ್ಥೆ ಮಾಡಿದ್ದಾರೆ. ಸಚಿವರ ಸೂಚನೆಯಂತೆ ಬೆಂಗಳೂರಿನಲ್ಲಿರುವ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರು ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಸಚಿವರ ಕಚೇರಿಯ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.