ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನಾನು ಬದಲಾಗಬೇಕು
ನಾನು ಬದಲಾಗಬೇಕು ಅಂದುಕೊಳ್ಳುತ್ತೇನೆ ನಿಜ, ಅಂದುಕೊಂಡ ಮಾತ್ರಕ್ಕೆ ಬದಲಾಗಿ ಬಿಡುತ್ತೇನೆಯೇ? ಮೊಂಡತನ, ಬೇಡವಾದ ಹಲವಾರು ಚಟುವಟಿಕೆಗಳನ್ನು ದಿನನಿತ್ಯ ಮುದ್ದಾಂ ಆಗಿ ನೀರು ಹಾಕಿ ಬೆಳೆಸುತ್ತೇನೆ. ಸಿಕ್ಕಿದ್ದೆಲ್ಲ ಬೇಕೆಂದು ಅದರ ಹಿಂದೆ ಬೆನ್ನು ಹತ್ತುತ್ತೇನೆ ಅದು ಬೇಕೋ ಬೇಡವೋ ಗೊತ್ತಿಲ್ಲ. ಆದರೆ ಸ್ನೇಹಿತರು ಪಕ್ಕದಲ್ಲಿದ್ದರೆ ಸಾಕು ಸಮೂಹ ಸನ್ನಿ ಮೈಯನ್ನು ಆವರಿಸಿಬಿಡುತ್ತದೆ. ನನಗೆ ತಿಳಿಯದಂತೆ ಇಲ್ಲ ಸಲ್ಲದನ್ನು ಮಾಡಿ ಬಿಡುತ್ತೇನೆ. ಕುತೂಹಲಕ್ಕೆ ಅಂತ ಬೇರೆ ಇನ್ನೇನೋ ಬೇಡದ್ದನ್ನು ನೋಡುವುದು ಆಮೇಲೆ ಛೇ! ಹಾಗೆಲ್ಲ ಇನ್ಮುಂದೆ ಮಾಡಲ್ಲ ಎನ್ನುತ್ತೇನೆ. ಮರುದಿನ ಅದೇ ರಾಗ ಅದೇ ತಾಳ. ನನ್ನ ನಡುವಳಿಕೆ ನನಗೇ ಒಮ್ಮೊಮ್ಮೆ ದಂಗಾಗಿಸುತ್ತದೆ. ದಾರಿ ತಪ್ಪಿದ್ದೇನೆ ಅಂತ ಅನ್ನಿಸಿದರೂ ಸುತ್ತ ಕಣ್ಣಾಡಿಸಿ ಮತ್ತೆ ಅದೇ ದಾರಿಯಲ್ಲಿ ಹಸಿರು ದೀಪ ತೋರಿಸಿಕೊಂಡು ಹೋಗುತ್ತೇನೆ. ಇದು ಬಹುಪಾಲು ಕಾಲೇಜು ಮಕ್ಕಳ ಸ್ವಗತ. ನನ್ನ ಮೂಲ ರೂಪವನ್ನು ಕಳೆದುಕೊಂಡಿದ್ದೇನೆ ಇನ್ನು ಬದಲಾಗಬೇಕೆಂದು ಬಯಸುತ್ತಾರೆ.
ಮನೆ ಬೆಳಗುವ ದೀಪ
ಏನೇ ಹೇಳಿ ಬದಲಾವಣೆಯು ಗುಪ್ತಗಾಮಿನಿಯಂತೆ ಸುಪ್ತವಾಗಿದ್ದರೂ ಜೀವಂತವಾಗಿರುತ್ತದೆ. ಕೆಟ್ಟದ್ದು ತನ್ನಿಂದ ತಾನೇ ಆಗುತ್ತದೆ. ಆದರೆ ನಾವು ಒಳ್ಳೆಯವರಾಗಬೇಕು ಬದಲಾಗಬೇಕೆಂದರೆ ಅದನ್ನು ನಾವು ಉದ್ದೇಶಪೂರ್ವಕವಾಗಿಯೇ ಮಾಡಬೇಕು. ಬದುಕಿನ ಒಂದು ಹಂತದಲ್ಲಿ ವಿಮರ್ಶೆ, ತಾರ್ಕಿಕ ಚರ್ಚೆಯು ಬಂದಾಗ ಕತ್ತೆಯಂತೆ ಬೆಳದೆನೆ ಹೊರತು ಬುದ್ಧಿ ಬೆಳೆಯಲಿಲ್ಲ ಅಂದರೆ ದೈಹಿಕ ಬೆಳವಣಿಗೆ ಆಯಿತೇ ಹೊರತು ಪ್ರಗತಿ ಕಾಣಲಿಲ್ಲ ಎಂಬ ನೋವು ಕಾಡುತ್ತದೆ. ತಿದ್ದಿ ತೀಡುವ ಶಿಲ್ಪಿಯಾದ ಗುರುಗಳ ಕೈಯಲ್ಲೂ ಉಳಿಪೆಟ್ಟು ತಿನ್ನಲಾಗದೇ ಬಂಡೆಗಲ್ಲಾಗಿ ಉಳಿದುಬಿಟ್ಟೆ ಎಂಬ ನೋವು ಇನ್ನಿಲ್ಲದಂತೆ ಕಾಡುತ್ತದೆ. ಉಳಿಪೆಟ್ಟು ಸಹಿಸಿದ್ದರೆ ಬದಲಾಗುತ್ತಿದ್ದೆ ಇಂದು ಮೂರ್ತಿಯಾಗಿರುತ್ತಿದ್ದೆ ಎಂದು ಹಳಹಳಿಸುವರು. ಇಂಥ ಪ್ರಸಂಗ ಈಗ ಬರುತ್ತಲೇ ಇರಲಿಲ್ಲ. ವಿನಮ್ರತೆ ವಿಧೇಯತೆ ಬದುಕಿನ ಪ್ರತಿ ಬದ್ಧತೆ ಇದ್ದಿದ್ದರೆ ಸುಲಭವಾಗಿ ಬದಲಾಗುತ್ತಿದ್ದೆ. ಜಗ ಬೆಳಗುವ ಸೂರ್ಯನಾಗಿರದಿದ್ದರೂ ಮನೆ ಬೆಳಗುವ ದೀಪವಾಗುತ್ತಿದ್ದೆ ಎನ್ನುವುದು ಉದ್ಯೋಗ ಅರಸುವ ವಯಸ್ಸು ದಾಟಿದ ಯುವಜನರ ಅಳಲು.
ಉತ್ತಮ ಗುಣ
ಆಸೆಬುರಕರನ್ನು ಹಣ ಕೊಟ್ಟು ವಶಮಾಡಿಕೊಳ್ಳಬಹುದು. ಆದರೆ ಒಬ್ಬ ಸಜ್ಜನನನ್ನು ಕೈವಶ ಮಾಡಿಕೊಳ್ಳಬೇಕಾದರೆ ಹಣ ನಡೆಯುವುದಿಲ್ಲ. ಉತ್ತಮ ಗುಣಗಳಿದ್ದರೆ ಸಾಕು. ಅಂದ್ಹಾಗೆ ಬದಲಾಗಬೇಕೆಂದರೆ ಅದಕ್ಕೆ ಹಣ ಬೇಡ. ಯೋಚನೆ ಬದಲಾದರೆ ಸಾಕು. ಅನ್ಯರನ್ನು ಅಳಿಯದೇ ನಮ್ಮ ಜವಾಬ್ದಾರಿಯನ್ನು ನಾವು ಅರಿತು ಮಾಡುವುದು ಬದಲಾವಣೆಯಲ್ಲದೇ ಮತ್ತೇನು? ನಾವು ಬದಲಾಗದಿದ್ದರೂ ಬದಲಾವಣೆಯ ಚಕ್ರ ತಿರುಗುತ್ತಲೇ ಇರುತ್ತದೆ. ಬದಲಾವಣೆ ಒಂದು ಮಂತ್ರದಂತೆ ಬದಲಾಗುವ ಜಗದ ನೀತಿ ನಿಯಮಗಳನ್ನು ತಿಳಿಸುತ್ತದೆ. ಹೀಗೆ ಹಲವಾರು ಜನರು ತಮ್ಮದೇ ಲೋಕದಲ್ಲಿ ನಿರರ್ಥಕವಾಗಿ ಬದುಕು ಸಾಗಿಸಿದವರ ಗೋಳು ಅವರ ಆಂತರ್ಯದ ಪಶ್ಚಾತ್ತಾಪವನ್ನು ತೋರಿಸುತ್ತದೆ. ಸ್ವಾಧ್ಯಾಯ ಅಂದರೆ ನಮ್ಮನ್ನು ನಾವು ಅರಿತರೆ ಬದಲಾಗಲು ಸುಲಭವಾಗುತ್ತದೆ. ಬೇರೆಯವರೊಂದಿಗೆ ಸೋತರೆ ಅದು ಸೋಲಲ್ಲ. ನಮ್ಮನ್ನು ಬದಲಾಯಿಸಲು ಸೋತರೆ ಅದು ದೊಡ್ಡ ಸೋಲು. ಮಕ್ಕಳಿದ್ದಾಗ ನಾವೆಲ್ಲ ಮುಗ್ಧರಾಗಿದ್ದೆವು. ಬೆಳೆದಂತೆಲ್ಲ ಕೆಟ್ಟದ್ದರ ಸಹವಾಸದಲ್ಲಿ ಬಿದ್ದು ಕೆಟ್ಟೆವು ಎನ್ನುವುದು ಗ್ರಹಸ್ಥರ ಗೋಳು.
ವ್ಯತ್ಯಾಸ ತರಬೇಕು
ನಾವು ತಿಳಿದಂತೆ ಬದುಕು ತುಂಬಾ ದೊಡ್ಡದಿಲ್ಲ. ಇಲ್ಲಿ ಬದಲಿಸಬೇಕಾದ್ದನ್ನು ಬದಲಿಸೋಣ. ಬದಲಾಯಿಸಲು ಸಾಧ್ಯವಾಗದ್ದನ್ನು ಒಪ್ಪಿಕೊಳ್ಳೋಣ. ಬಾಯ್ತುಂಬ ನಕ್ಕುಬಿಡೋಣ. ಮನಸಾರೆ ಕ್ಷಮೆ ಕೇಳೋಣ. ಇತರರನ್ನು ಮನಸಾರೆ ಕ್ಷಮಿಸಿಬಿಡೋಣ. ಯಾವುದೇ ಪ್ರತಿಫಲವನ್ನು ಬಯಸದೆ ಹಣ್ಣುಗಳನ್ನು ನೆರಳನ್ನು ನೀಡುವ ಮರದಂತೆ ಬದಲಾಗಬೇಕು. ನನ್ನಿಂದ ಎಲ್ಲರಿಗೂ ಉಪಯೋಗವಾಗಬೇಕು ಎಂದು ಅಂದುಕೊಳ್ಳುತ್ತೇವೆ. ನಮ್ಮ ಕಾರ್ಯಗಳು ಸಮಾಜದಲ್ಲಿ ವ್ಯತ್ಯಾಸವನ್ನು ತರುವಂತಿರಬೇಕು. ಸುತ್ತಮುತ್ತಲಿರುವ ಜನರ ಮೇಲೆ ಪ್ರಭಾವ ಬೀರುವಂತಿರಬೇಕು. ಇದು ಮಹತ್ವಾಕಾಂಕಿಗಳ ಉವಾಚ.
ಅನಾನುಕೂಲ ಸನ್ನಿವೇಶ
ಬದುಕಿನ ಅರ್ಧ ಪಯಣ ಮುಗಿಯುವಷ್ಟರಲ್ಲಿ ಬೇಕಾಗಿದ್ದನ್ನು, ಆತ್ಮೀಯರನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ ಭಾವನೆಗಳ ಘರ್ಷಣೆ ಮತ್ತೊಂದೆಡೆ ಇದೆಲ್ಲ ಸಾಲದೆಂಬಂತೆ ಮುಂದಿನ ಜೀವನದ ಕುರಿತು ಅಭದ್ರತೆಗಳು ಸಾಲಾಗಿ ನಿಂತು ಪ್ರಶ್ನಿಸುತ್ತವೆ. ಇರುವ ಮನೆ, ಹಾಕಿಕೊಳ್ಳುವ ಬಟ್ಟೆ ಆಡುವ ಮಾತಿನಲ್ಲಿ ಬದಲಾದರೆ ಅದು ಬಾಹ್ಯ ಆಯಾಮಗಳಲ್ಲಿ ಬದಲಾವಣೆ. ಇದೇ ಬದಲಾವಣೆ ಅಂದುಕೊಂಡರೆ ಅದು ಮೂರ್ಖತನ. ನಾವು ಬದಲಾಗುವುದು ಯಾವುದೇ ಅನಾನುಕೂಲ ಸನ್ನಿವೇಶಗಳಲ್ಲೂ ಸಹ ಸಂಯಮದಿಂದ ವರ್ತಿಸಿದಾಗ ಮಾತ್ರ. ಅಂತ ತಿಳಿದರೂ ಬದಲಾಗುವ ಹಾದಿಯಲ್ಲಿ ಇನ್ನೂ ಒಂದೋ ಎರಡೋ ಹೆಜ್ಜೆ ಇಡಲಾಗಿರುತ್ತದೆ.
ನಿರಾಶೆ ಒಪ್ಪಿಕೊಳ್ಳಬೇಕು
ಬದುಕಿನಲ್ಲಿ ಸವಾಲುಗಳೇ ಇರದಿದ್ದರೆ ಏನು ಚೆಂದ ಹೇಳಿ. ಬದುಕು ಕುತೂಹಲಭರಿತವಾಗಿದೆ ಎಂದರೆ ಅದಕ್ಕೆ ಕಾರಣವೇ ಸಮಸ್ಯೆಗಳು. ಸವಾಲುಗಳಿಗೆ ಸವಾಲೆಸೆದು ಬದುಕಿದರೆ ಜೀವನವನ್ನು ಅರ್ಥಪೂರ್ಣವಾಗಿ ರೂಪಿಸಿಕೊಂಡಂತೆ. ಸವಾಲುಗಳನ್ನು ಎದುರಿಸುವಾಗ ಆದ ನಿರಾಶೆಗಳನ್ನು ಒಪ್ಪಿಕೊಳ್ಳಲೇಬೇಕು. ಹಾಗೆ ಒಪ್ಪಿಕೊಂಡವೆಂದು ಭರವಸೆಗಳನ್ನು ಎಂದಿಗೂ ಕಳೆದುಕೊಳ್ಳುವ ಹಾಗಿಲ್ಲ. ಕಷ್ಟಗಳ ಬಿರುಗಾಳಿ ಬೀಸಲಿ ಉತ್ಸಾಹಭರಿತವಾಗಿರಲಿ ಆಹ್ಲಾದಕರವಾಗಿರಲಿ ಮನ. ಹೃದಯ ಪ್ರೀತಿ ಬೆರೆಸಿದ ಸಿಹಿ ಕೊಳವಾಗಲಿ. ಎಂದು ಹಾರೈಸುವ ವಯಸ್ಸು ಬಂದಾಗಿರುತ್ತದೆ.
ನಂಬಿಕೆ
ನಂಬಿಕೆ ಕನ್ನಡಿ ಇದ್ದಂತೆ ಒಡೆದರೆ ಮುಖ ಕಾಣುವುದಿಲ್ಲ. ಮತ್ತೆ ಜೋಡಿಸಿದರೂ ಮೊದಲಿನ ತರಹ ಸ್ಪಷ್ಟವಾಗಿ ಕಾಣುವುದಿಲ್ಲ. ಹಾಗಾಗಿ ಇತರರ ವಿಷಯದಲ್ಲಿ ನಂಬಿಗಸ್ತರಾಗಿ ಉಳಿಯಬೇಕು. ನಂಬಿಕೆ ಗಳಿಸಬೇಕೆಂದರೆ ಹಲವು ವರುಷಗಳೇ ಬೇಕು. ಆದರೆ, ಕಳೆದುಕೊಳ್ಳಲು ಒಂದು ನಿಮಿಷ ಸಾಕು. ನಂಬಿಕೆ ಕಳೆದುಕೊಂಡು ವಂಚನೆ ಮಾಡಿಕೊಂಡು ಬದುಕುವುದು ಸುಲಭ. ಆದರೆ ಆತ್ಮಸಾಕ್ಷಿಗೆ ಅನುಗುಣವಾಗಿ ಬದಲಾಗುವುದು ತುಂಬಾ ಕಷ್ಟ. ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ನಿರ್ಲಕ್ಷಿಸಿ ನಿರಂತರವಾಗಿ ಹೋದರೆ ಮನೆಯಾಗಲಿ ಬದುಕಾಗಲಿ ನೀರಸ ಅನ್ನಿಸದೇ ಇರದು. ಎಂಬುದು ಮುಂದಿನ ಹಂತದಲ್ಲಿ ಮನವರಿಕೆಯಾಗುತ್ತದೆ.
ಶಿಕ್ಷಿತಗೊಳಿಸಬೇಕು
ಬೇರೆಯವರನ್ನು ಅಳೆಯುವುದರಲ್ಲೇ ಬದುಕಿನ ಅರ್ಧಕ್ಕಿಂತ ಭಾಗ ಸವೆದು ಹೋಯಿತು. ನಾವು ಇತರರನ್ನು ಯಾವ ಅಳತೆಗೋಲಿನಿಂದ ಅಳೆಯುತ್ತೇವೆಯೋ ಅದೇ ಅಳತೆಗೋಲು ನಮ್ಮನ್ನು ಅಳೆಯುತ್ತದೆಂಬುದನ್ನು ತಿಳಿದು ನಡೆಯುವ ಬದಲಾವಣೆ ತಂದುಕೊಳ್ಳಬೇಕು. ಬದಲಾವಣೆ ಆಹಾರದಲ್ಲಿರುವ ಉಪ್ಪಿನಂತೆ. ನಾವು ಉತ್ತಮರಾಗಿ ಬದಲಾಗಬೇಕು. ಜಿಮ್‌ಗೆ ಹೋಗಿ, ವ್ಯಾಯಾಮ ಮಾಡಿ ಕಟ್ಟುಮಸ್ತಾದ ದೇಹವನ್ನು ಬೆಳೆಸಿದರೆ ಅದು ದೈಹಿಕ ಬದಲಾವಣೆ. ಸಾಕಷ್ಟು ಓದಿದರೆ ಪುಸ್ತಕದಲ್ಲಿರುವ ಜ್ಞಾನ ಮಸ್ತಕಕ್ಕೆ ಇಳಿಸಿದಂತೆ. ಮಸ್ತಕಕ್ಕೆ ಇಳಿಸಿದ ಮಾತ್ರಕ್ಕೆ ನಾವು ಬದಲಾಗುವುದಿಲ್ಲ. ಓದು ಬರಹದಿಂದ ಶಿಕ್ಷಿತರಾದರೆ ಸಾಲದು. ಹೃದಯವನ್ನು ಶಿಕ್ಷಿತಗೊಳಿಸಬೇಕು ಮನಸನ್ನು ಸುಶಿಕ್ಷಿತಗೊಳಿಸಬೇಕು.
ಸಂಜೀವಿನಿ
ಪುಟ್ಟ ಹಕ್ಕಿಯೊಂದು ನೀಲಾಗಸದಲ್ಲಿ ಹಾರುವುದನ್ನು ಕಲಿತ ಮೇಲೆ ಕೆಳಗೆ ಬರುವುದನ್ನು ಮರೆಯುವುದಿಲ್ಲ. ಆದರೆ ನಮಗೆ ಮಾತ್ರ ನಮ್ಮ ಪ್ರಗತಿಯ ಗತಿ ಸ್ವಲ್ಪ ಬದಲಾದರೂ ಸಾಕು ಭೂಮಿ ಕಾಣುವುದೇ ಇಲ್ಲ. ಬೇರೆಯವರು ನಮಗಿಂತ ಕನಿಷ್ಟ ಎನಿಸಿಬಿಡುತ್ತದೆ. ಅಗತ್ಯವಾದ ಸಮಯದಲ್ಲಿ ಬದಲಾದರೆ ಬದಲಾವಣೆಯು ಅಮೂಲ್ಯವೆನಿಸುವುದು. ಅದರ ಮೌಲ್ಯವೂ ಹೆಚ್ಚುವುದು. ಸಮಯವಿದ್ದಾಗ ಸರಿಯಾದ ತಿಳುವಳಿಕೆ ಇರುವುದಿಲ್ಲ. ತಿಳುವಳಿಕೆ ಬಂದಾಗ ಸರಿಯಾದ ಸಮಯವಿರುವುದಿಲ್ಲ. ಸಮಯ ಮತ್ತು ತಿಳುವಳಿಕೆ ಎರಡೂ ಕೂಡಿ ಇರುವಾಗ ಬದಲಾದರೆ ಬದಲಾವಣೆ ಬದುಕಿಗೆ ಸಂಜೀವಿನಿಯಾಗುವುದು ಅಲ್ಲವೇ..?