ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ್. ಕೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ (ಎಸ್ ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಳೆದ ಆಗಸ್ಟ್ ೨೪ ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಅರ್ಹ ಮತದಾರರು ಹಾಗೂ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಬಯಸುವ ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಸೆ. ೨೩ ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಅಗತ್ಯ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಕೇಸ್ವಾನ ಸಭಾಂಗಣದಲ್ಲಿ ಬುಧವಾರ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಾಹಿತಿ ತಾರ್ಕಿಕವಾಗಿ ಹೊಂದಾಣಿಕೆಯಾಗದ ಮತ್ತು ೨೦೦೨ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಆಗದ ಜಿಲ್ಲೆಯ ಒಟ್ಟು ೨೪,೫೨೪ ಮತದಾರರಿಗೆ ಮತದಾರರ ನೋಂದಣಾಧಿಕಾರಿಗಳು ವಿಚಾರಣೆ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇಂತಹ ಮತದಾರರಿಗೆ ಈಗಾಗಲೇ ನೋಟಿಸ್ ನೀಡಲಾಗುತ್ತಿದ್ದು, ನೋಟಿಸ್‌ನಲ್ಲಿಯೇ ವಿಚಾರಣೆಯ ಸ್ಥಳ ಹಾಗೂ ದಿನಾಂಕವನ್ನು ನಮೂದಿಸಲಾಗಿದೆ. ಬಹು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ಅವರು ವಿಚಾರಣೆಗೆ ಬಂದ ಸಂದರ್ಭದಲ್ಲಿ ದಾಖಲೆ ನೀಡಿಲ್ಲ ಎಂಬ ಆಧಾರದ ಮೇಲೆ ನಿರ್ಧರಿಸದೇ ಮತ್ತೊಂದು ಬಾರಿ ಅವರಿಗೆ ಅವಕಾಶ ನೀಡಬೇಕು. ಒಟ್ಟಾರೆ ಚುನಾವಣಾ ಆಯೋಗದ ನಿರ್ದೇಶಾನುಸಾರ ಕ್ರಮವಹಿಸಬೇಕು ಎಂದ ಅವರು, ಮರಣ ಪ್ರಮಾಣ ಪತ್ರ ತೆಗೆದುಕೊಂಡು ಡಿಲೀಟ್ ಮಾಡಲು ಕ್ರಮವಹಿಸಬೇಕು ಎಂದರು.
ಮತಗಟ್ಟೆವಾರು ನೋಟೀಸ್ ಸಮಯದೊಳಗೆ ನೀಡಬೇಕು. ಸಾಕಷ್ಟು ಸಮಯ ಒದಗಿಸಿ ನೋಟೀಸ್ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ನೋಟಿಸ್ ಪಡೆದ ಮತದಾರರು ನಿಗದಿತ ದಿನಾಂಕದಂದು ಅಗತ್ಯ ದಾಖಲೆಗಳೊಂದಿಗೆ ವಿಚಾರಣಾ ಸ್ಥಳಕ್ಕೆ ಹಾಜರಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸ್ಥಳೀಯ ಆಡಳಿತದ ಸಹಕಾರ ಪಡೆದುಕೊಂಡು ಸಂಬಂಧಿಸಿದ ಮತದಾರರಿಗೆ ತಿಳಿ ಹೇಳಬೇಕು. ನೋಟೀಸ್ ನೀಡಿದರೂ ಬರದೇ ಇದ್ದರು ಖುದ್ದಾಗಿ ವಿಸಿ ಮಾಡಿ ಕರೆ ಮಾಡಿ ಮುಂಚಿತವಾಗಿ ತಿಳಿಸಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು. ತಲಾಟಿ, ಡಾಟಾ ಎಂಟ್ರಿ ಆಪರೇಟರ್ ಅವರನ್ನು ಇದರಲ್ಲಿ
ತೊಡಗಿಸಿಕೊಸಿಕೊಂಡು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಸೂಚಿಸಿದ ಅವರು, ಸೂಕ್ಷ್ಮವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದೂ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಸೆಪ್ಟೆಂಬರ್ ೧೯ ಮತ್ತು ೨೦ ರಂದು ವಿಶೇಷ ಆಂದೋಲನ: ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಅರ್ಹ ಮತದಾರರು ಮತ್ತು ಅಕ್ಟೋಬರ್ ೦೧, ೨೦೨೬ ಕ್ಕೆ ೧೮ ವರ್ಷ ಪೂರೈಸುವ ಯುವ ಮತದಾರರ ಅನುಕೂಲಕ್ಕಾಗಿ ದಿನಾಂಕ ೧೯-೦೯-೨೦೨೬ (ಶನಿವಾರ) ಮತ್ತು ೨೦-೦೯-೨೦೨೬ (ಭಾನುವಾರ) ರಂದು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ದಿನಗಳಲ್ಲಿ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ಬೆಳಿಗ್ಗೆಯಿಂದಲೇ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಲಭ್ಯವಿರುತ್ತಾರೆ ಎಂದರು.
ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-೬ಎ: ಅನಿವಾಸಿ ಭಾರತೀಯರಿಗಾಗಿ ನಮೂನೆ-೭: ಪಟ್ಟಿಯಿಂದ ಹೆಸರು ತೆಗೆದುಹಾಕಲು (ಆಕ್ಷೇಪಣೆ) ನಮೂನೆ-೮: ವಿಳಾಸ ಬದಲಾವಣೆ, ಹೆಸರು ತಿದ್ದುಪಡಿ ಮತ್ತು ಗುರುತಿನ ಚೀಟಿ ಬದಲಾವಣೆಗಾಗಿ ಆನ್‌ಲೈನ್ ಹಾಗೂ ಕಚೇರಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂಬುದನ್ನು ಅಧಿಕಾರಿಗಳು ಮನವರಿಕೆ ಮಾಡಿಕೊಡಲು ಸೂಚಿಸಿದರು.
ವಿಶೇಷ ಆಂದೋಲನದ ದಿನಗಳನ್ನು ಹೊರತುಪಡಿಸಿ, ಬಾಕಿ ಉಳಿದ ದಿನಗಳಲ್ಲಿ ಸಾರ್ವಜನಿಕರು ಸಂಬಂಧಿಸಿದ ತಹಶೀಲ್ದಾರ್ ಕಚೇರಿ ಅಥವಾ ಮತದಾರರ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದು. ಜೊತೆಗೆ, ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ https://voters.eci.gov.in/ (Voter Service Portal) ಮೂಲಕವೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ವಿಜಯಪುರ ಉಪ ವಿಭಾಗಾಧಿಕಾರಿ ಶ್ರೀಮತಿ ಜುಫಿಶಾನ್ ಹಕ್, ಇಂಡಿ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಚುನಾವಣಾ ತಹಶೀಲ್ದಾರ ಪವಾರ, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ಸಚ್ಚಿದಾನಂದ ತೇರದಾಳ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

