ಬಸವನಬಾಗೇವಾಡಿಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ | ಶ್ರೀ ಬಸವೇಶ್ವರ ಸರ್ಕಾರಿ ಪಪೂ ಕಾಲೇಜಿನ 2006-7ನೇ ಸಾಲಿನ ಎಸ್ಸೆಸ್ಸೆಲ್ಸಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕಾಲದ ಚಕ್ರ ಉರುಳಿ 20 ವರ್ಷಗಳು ಕಳೆದರೂ, ಗುರು-ಶಿಷ್ಯರ ನಡುವಿನ ಪ್ರೀತಿ, ಗೌರವ ಮತ್ತು ಆತ್ಮೀಯತೆ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ ಎಂಬುದಕ್ಕೆ ಪಟ್ಟಣದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ ಸಾಕ್ಷಿಯಾಯಿತು.
ಪಟ್ಟಣದ ಶ್ರೀ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2006-7ನೇ ಸಾಲಿನ SSLC ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ಪುಷ್ಪವೃಷ್ಟಿಗೈದು ಶಿಕ್ಷಕರನ್ನು ವೇದಿಕೆಗೆ ಬರಮಾಡಿಕೊಂಡರು.
ಒಂದೇ ಶಾಲೆಯ ಆವರಣದಲ್ಲಿ ಕಲಿತು, 20 ವರ್ಷಗಳ ನಂತರ ಮತ್ತೆ ಒಂದೇ ವೇದಿಕೆಯಲ್ಲಿ ಸೇರಿ, ಶಾಲೆಯಲ್ಲಿ ಕಳೆದ ತಮ್ಮ ಬಾಲ್ಯದ ಸಿಹಿ-ಕಹಿ ನೆನಪುಗಳನ್ನು ವಿದ್ಯಾರ್ಥಿಗಳು ಮೆಲುಕು ಹಾಕುವ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡರು.
ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಸ್. ಕುದರಕರ, ಗುರು ಎಂಬ ಪದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ಪೂಜ್ಯಭಾವನೆಯಿಂದ ನಾವುಗಳು ಗೌರವಿಸಿಕೊಂಡು ಬಂದಿದ್ದೇವೆ. ಅಂದಿನ ಗುರುಕುಲದ ಶಿಕ್ಷಣದಲ್ಲಿ ಗುರು-ಹಿರಿಯರಿಗೆ ಗೌರವಿಸುವ ಗುಣಗಳೊಂದಿಗೆ ಶಿಕ್ಷಣ ನೀಡಲಾಗುತ್ತಿತ್ತು. ಇಂದಿಗೂ ಅಂತಹ ಕಲಿಕಾ ಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿದೆ. ಇದಕ್ಕೆ ಉದಾಹರಣೆಯಾಗಿ ಎರಡು ದಶಕ ಕಳೆದರೂ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸಿ ಹಿರಿಯ ವಿದ್ಯಾರ್ಥಿಗಳು ಸಮಾಗಮಗೊಂಡು ಗುರುವಂದನೆ ಸಲ್ಲಿಸುವ ಸಮಾರಂಭ ಏರ್ಪಡಿಸಲಾಗಿದೆ. ಮನೋಧರ್ಮಕ್ಕೆ ಅನುಗುಣವಾಗಿ ಶಿಕ್ಷಕ ವೃತ್ತಿ ಜೀವನ ಪೂರೈಸುವ ಮೂಲಕ ಸಮಾಜಕ್ಕೆ ಸುಸಂಸ್ಕೃತ ಹಾಗೂ ಉತ್ತಮ ಪ್ರಜೆಗಳನ್ನು ನೀಡಿದ್ದೇನೆಂಬ ಆತ್ಮತೃಪ್ತಿ ದೊರೆತಿದೆ ಎಂದು ಭಾವುಕರಾದರು.
ಹಳೆ ವಿದ್ಯಾರ್ಥಿಗಳ ಕುರಿತು ಬಹಳ ಮನಮುಟ್ಟುಹಾಗೆ ಮಾತನಾಡಿದ ನಿವೃತ್ತ ಶಿಕ್ಷಕ ಎಂ ಎಸ್ ಝಳಕಿ, ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣ ಮಾಡುವಂತೆ ಅವರು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿ.ಶಿಕ್ಷಕ ಕೆ.ಎಸ್.ಕಾಖಂಡಕಿ, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಹಮತ ಭಾಂದವ್ಯ ಎಂಬುದು ಕಷ್ಟದ ಮಾತು, ಈ ನಡುವೆಯೂ ಗುರುಗಳ ಮೇಲಿನ ಪ್ರೀತಿಯಿಂದ ಕಾರ್ಯಕ್ರಮ ರೂಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಸ್. ಎಸ್. ಝಳಕಿ, ಎಸ್.ಎಸ್. ಕುದರಕರ, ಆರ್.ಎನ್. ಪೂಜಾರಿ, ಕೆ.ಎಸ್.ಕಾಖಂಡಕಿ, ಎಮ್. ಎಸ್. ಝಳಕಿ, ಎಮ್.ಎಸ್. ಮನಹಳ್ಳಿ, ಎಸ್.ಕೆ. ಸೋಮನಕಟ್ಟಿ, ಕೆ.ಬಿ. ಕಡೆಮನಿ, ವಾಯ್.ಜಿ.ಮೇಟಿ, ಕೆ.ಎಸ್. ಕಾಖಂಡಕಿ, ಎ.ಎಸ್. ಬಾಳಿಕಾಯಿ, ಎಸ್.ಎಸ್. ಬಿರಾದಾರ, ಎಮ್.ಎಮ್. ಗುಡ್ಡವಾಡ, ಶ್ರೀಮತಿ ಎಸ್.ಬಿ. ಅಬಂಗಿ, ಶ್ರೀಮತಿ ಸಿ.ಜಿ.ಹುಳಗುಳಕರ, ಶ್ರೀಮತಿ ಎಸ್.ಎಸ್.ಕಡೇವಾಲ, ಶ್ರೀಮತಿ ಎಸ್.ಎಸ್.ಅಂಗಡಿ, ಶ್ರೀಮತಿ ಬಿ.ಜಿ. ದೊಡಮನಿ, ಶ್ರೀಮತಿ ಎ.ಬಿ.ಪಾಟೀಲ, ಶ್ರೀಮತಿ ಜಿ.ವಿ. ಗಬ್ಬೂರ, ಶ್ರೀಮತಿ ಬಿ.ಜಿ. ಬಿರಾದಾರ ಸೇರಿದಂತೆ ಎಲ್ಲ ಶಿಕ್ಷಕರನ್ನು ಸನ್ಮಾನಿಸಲಾಯಿತು.

