ಉದಯರಶ್ಮಿ ದಿನಪತ್ರಿಕೆ
ಅಥಣಿ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ 2026-27ನೇ ಸಾಲಿನಡಿ ಮಂಜೂರಾದ 1,118 ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ಮಾಜಿ ಉಪ ಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಪಟ್ಟಣದ ನಿರೀಕ್ಷಣಾ ಮಂದಿರ ಆವರಣದಲ್ಲಿ ವಿತರಿಸಿದರು.
ವಿವಿಧ ವೃತ್ತಿಯ ಕಾರ್ಮಿಕರಿಗೆ ವೃತ್ತಿಗೆ ಅನುಗುಣವಾಗಿ ಕಿಟ್ ವಿತರಿಸಲಾಯಿತು. ಇದರಲ್ಲಿ ಎಲೆಕ್ಟ್ರಿಷಿಯನ್ 167, ಪ್ಲಂಬರ್ 75, ಕಾರ್ಪೆಂಟರ್ 98, ಮೇಸನ್ 600, ವೆಲ್ಡರ್ 98 ಹಾಗೂ ಪೇಂಟರ್ 80 ಸೇರಿದಂತೆ ಒಟ್ಟು 1,118 ಕಾರ್ಮಿಕರು ಸೌಲಭ್ಯ ಪಡೆದರು.
ಬಳಿಕ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಅವರು ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರು ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ಅವರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕೆಲಸದ ಸ್ಥಳದಲ್ಲಿ ಅಪಘಾತ ತಡೆಗಟ್ಟಲು ಸುರಕ್ಷತಾ ಪರಿಕರಗಳ ಬಳಕೆ ಕಡ್ಡಾಯ. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಎಲ್ಲ ಯೋಜನೆಗಳು ತಲುಪುವಂತೆ ಮಾಡಲಾಗುವುದು ಎಂದರು.
“ಕಾರ್ಮಿಕರ ಮಕ್ಕಳು ತಂದೆಯಂತೆ ಕಾರ್ಮಿಕರಾಗಿ ಉಳಿಯಬಾರದು. ಅವರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂಬುದು ನಮ್ಮ ಆಶಯ. ಅದಕ್ಕಾಗಿಯೇ ಸತ್ತಿ ರಸ್ತೆಯಲ್ಲಿ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ನಿರ್ಮಾಣಕ್ಕೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡ ಕೂಡಲೇ ಇಲಾಖೆಗೆ ಹಸ್ತಾಂತರಿಸಲಾಗುವುದು” ಎಂದು ಅವರು ತಿಳಿಸಿದರು.
ಕಾರ್ಮಿಕರ ಮಕ್ಕಳ ಶಿಕ್ಷಣ, ಆರೋಗ್ಯ, ವಸತಿ ಮತ್ತು ಸಾಮಾಜಿಕ ಭದ್ರತೆಗಾಗಿ ಕಲ್ಯಾಣ ಮಂಡಳಿಯು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ವೇಳೆ ತಾಲೂಕು ಕಾರ್ಮಿಕ ಇಲಾಖೆ ಅಧಿಕಾರಿ ಭುವನೇಶ್ವರಿ ಢಾಲೆ, ಸಚಿನ್, ಕಾರ್ಮಿಕ ಇಲಾಖೆ ಸಿಬ್ಬಂದಿ, ಕಾರ್ಮಿಕ ಮುಖಂಡರು ಮತ್ತು ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.

