ಜಿಲ್ಲಾ ಕಾರಾಗೃಹದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ | ಕೇಂದ್ರ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಮಾಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜೀವನದಲ್ಲಿ ಬರುವ ಸಮಸ್ಯೆಗಳನ್ನು ಮನುಷ್ಯ ಜ್ಞಾನವಂತನಾಗಿ ಶಾಂತಿ ಹಾಗೂ ಸಂಯಮದಿಂದ ಎದುರಿಸಿ ಯಶಸ್ಸು ಪಡೆಯಬೇಕು ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಮಾಳಿ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ವೇಗದಿಂದ ಅಜ್ಞಾನಿಗಳಾಗಿ ಕೆಟ್ಟ ಕೃತ್ಯ ಎಸಗಿ ಜೀವನ ವ್ಯರ್ಥ ಮಾಡಿಕೊಳ್ಳಬಾರದು ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಬಿ. ಮೊರಟಗಿ ಮಾತನಾಡಿ, ಮನುಷ್ಯ ಮೂಲತಃ ವಿಚಾರವಾದಿಯಾಗಿದ್ದು, ಅದರೊಂದಿಗೆ ಶಿಕ್ಷಣವಂತರಾಗಿ ತನ್ನ ವಿಚಾರಗಳನ್ನು ವಿಸ್ತರಿಸಿಕೊಳ್ಳಲು ಅಕ್ಷರ ಜ್ಞಾನ ಅತ್ಯಂತ ಅವಶ್ಯಕವಾಗಿದೆ. ಸಾಕ್ಷರರಾಗುವುದು ನಮ್ಮೆಲ್ಲರ ಮೂಲ ಕರ್ತವ್ಯ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಅಭಿವೃದ್ಧಿ ಉಪನಿರ್ದೇಶಕ ಸೈಯಿದಾ ಅನ್ನೀಸ್ ಮಾತನಾಡಿ, ಮಾನಸಿಕ ಒತ್ತಡದಿಂದ ಆದಂತಹ ಕೃತ್ಯಗಳಿಂದ ಮನುಷ್ಯ ತನ್ನ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒತ್ತಡದಿಂದ ಹೊರಬರಲು ಓದು-ಬರಹ ಹಾಗೂ ಜ್ಞಾನಿಗಳ ವಿಚಾರಗಳನ್ನು ತಿಳಿದುಕೊಂಡು ಜೀವನವನ್ನು ಸುಂದರಮಯವಾಗಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಬಂಧಿಗಳಿಗೆ ಸಾಕ್ಷರತಾ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನಗಳನ್ನು ವಿತರಿಸಲಾಯಿತು. ಜಿ.ಎಸ್. ಕಾಪಸೆ ಕಾರ್ಯಕ್ರಮ ನಿರೂಪಿಸಿದರು. ಕಾರಾಗೃಹ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

