ಕೊಲ್ಹಾರದ ಜಮೀನುಗಳಲ್ಲಿ ಕಳ್ಳರ ಕೈಚಳಕ | ರೈತರಲ್ಲಿ ಆತಂಕ | ಶೀಘ್ರ ಪತ್ತೆಗೆ ಸಾರ್ವಜನಿಕರ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಪೌಜಿ ದಾಬಾ (ಸೈನಿಕ ವೃತ್ತ) ಸಮೀಪದ ಜಮೀನುಗಳಲ್ಲಿ ಅಳವಡಿಸಲಾಗಿದ್ದ ಮೂರು ವಿದ್ಯುತ್ ಮೋಟಾರ್ ಪಂಪ್‌ಸೆಟ್‌ಗಳನ್ನು ಕಳ್ಳರು ಒಂದೇ ರಾತ್ರಿ ಬಿಚ್ಚಿಕೊಂಡು ಪರಾರಿಯಾಗಿರುವ ಘಟನೆ ರೈತರಲ್ಲಿ ಆತಂಕ ಮೂಡಿಸಿದೆ.
ಸೆ. 5ರ ಶನಿವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಗುರುಲಿಂಗಪ್ಪ ಸಂಗಪ್ಪ ಗಣಿಯವರ ಜಮೀನಿನಲ್ಲಿದ್ದ 5 ಎಚ್‌ಪಿ ಸಾಮರ್ಥ್ಯದ ಪಂಪ್‌ಸೆಟ್, ಅಶೋಕ ಸಂಗಪ್ಪ ಹುದ್ದಾರ ಅವರ ಜಮೀನಿನಲ್ಲಿದ್ದ 5 ಎಚ್‌ಪಿ ಪಂಪ್‌ಸೆಟ್ ಹಾಗೂ ಬಸವರಾಜ ಸಿದ್ದಪ್ಪ ಹುದ್ದಾರ ಅವರ ಜಮೀನಿನಲ್ಲಿದ್ದ ಜಕ್ಕಪ್ಪ ಕೊಂತಿಕಲ್ಲ ಅವರಿಗೆ ಸೇರಿದ 10 ಎಚ್‌ಪಿ ಸಾಮರ್ಥ್ಯದ ಪಂಪ್‌ಸೆಟ್ ಮೋಟಾರ್‌ಗಳನ್ನು ಕಳ್ಳರು ಬಿಚ್ಚಿಕೊಂಡು ಕೊಂಡೊಯ್ದಿದ್ದಾರೆ.
ರವಿವಾರ ಬೆಳಿಗ್ಗೆ ವಾಡಿಕೆಯಂತೆ ಜಮೀನುಗಳಿಗೆ ತೆರಳಿದ ರೈತರು ಪಂಪ್‌ಸೆಟ್‌ಗಳು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಮೋಟಾರ್‌ಗಳನ್ನು ಬಿಚ್ಚಿಕೊಂಡು ಕಳ್ಳರು ಪರಾರಿಯಾಗಿರುವುದು ಗೊತ್ತಾಗಿದೆ. ತಕ್ಷಣ ಜಮೀನು ಮಾಲೀಕರು ಕೊಲ್ಹಾರ ಪೊಲೀಸ್ ಠಾಣೆಗೆ ತೆರಳಿ ಪಿಎಸ್‌ಐ ಅಶೋಕ ನಾಯಕ ಅವರಿಗೆ ದೂರು ನೀಡಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
ಬಾಕ್ಸ್
ಸಾಲು ಸಾಲು ಕಳವು
ಒಂದೇ ರಾತ್ರಿ ಅಕ್ಕಪಕ್ಕದ ಮೂರು ಜಮೀನುಗಳಲ್ಲಿ ಪಂಪ್‌ಸೆಟ್‌ಗಳೇ ಕಳವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೃಷಿ ಚಟುವಟಿಕೆಗಳಿಗೆ ಪ್ರಮುಖವಾಗಿರುವ ದುಬಾರಿ ಮೋಟಾರ್‌ಗಳನ್ನು ಕಳೆದುಕೊಂಡಿರುವ ರೈತರು ಕಂಗಾಲಾಗಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ತನಿಖೆ ಚುರುಕುಗೊಳಿಸಿ ಕಳ್ಳರನ್ನು ಶೀಘ್ರ ಪತ್ತೆಹಚ್ಚಬೇಕು. ಕಳವಾಗಿರುವ ಪಂಪ್‌ಸೆಟ್‌ಗಳನ್ನು ಮರಳಿ ಕೊಡಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
