ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಉದ್ಯೋಗ ಭರವಸಾ ಕೋಶ, ಐಕ್ಯೂಎಸಿ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ‘ದೀಪಿಕಾ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ’ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಜಮಖಂಡಿ ಪ್ರತಿನಿಧಿ ಶೀತಲ ಕೆ. ಮಾಲಗಾಂವೆ ಮಾತನಾಡಿ, ಕರ್ನಾಟಕದ ಹೆಣ್ಣುಮಕ್ಕಳು ಆರ್ಥಿಕ ಅಡಚಣೆಯಿಲ್ಲದೆ ಉನ್ನತ ಶಿಕ್ಷಣ ಮುಂದುವರಿಸಲು ದೀಪಿಕಾ ವಿದ್ಯಾರ್ಥಿವೇತನ ನೆರವಾಗಲಿದೆ. ಅರ್ಹ ವಿದ್ಯಾರ್ಥಿನಿಯರಿಗೆ ಕೋರ್ಸ್ ಅವಧಿಯವರೆಗೆ ಪ್ರತಿ ವರ್ಷ 30 ಸಾವಿರ ವಿದ್ಯಾರ್ಥಿವೇತನ ದೊರೆಯಲಿದೆ. ಮೂರು ವರ್ಷದ ಪದವಿ ಕೋರ್ಸ್‌ಗೆ 90 ಸಾವಿರ ಹಾಗೂ ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗೆ 60 ಸಾವಿರದವರೆಗೆ ನೆರವು ಸಿಗಲಿದೆ ಎಂದು ತಿಳಿಸಿದರು.
ಸಂಯೋಜಕ ಯಾಸೀನ ಆರ್. ಬಾಗವಾನ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಹಾಗೂ ಸರ್ಕಾರಿ ಕಾಲೇಜಿನಲ್ಲಿ 12ನೇ ತರಗತಿ ಪೂರ್ಣಗೊಳಿಸಿ, ಮೊದಲ ಬಾರಿಗೆ ಪದವಿ, ವೃತ್ತಿಪರ ಪದವಿ ಅಥವಾ ಡಿಪ್ಲೊಮಾ ಪ್ರವೇಶ ಪಡೆದ ವಿದ್ಯಾರ್ಥಿನಿಯರು ಅರ್ಹರಾಗುತ್ತಾರೆ. ಅರ್ಜಿ ಸಲ್ಲಿಸುವಾಗ ಆಧಾರ್, ಅಂಕಪಟ್ಟಿ, ವಿದ್ಯಾರ್ಥಿ ಗುರುತಿನ ಚೀಟಿ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾಗಿ ನೀಡಬೇಕು. ಯಾವುದೇ ಸೆಮಿಸ್ಟರ್‌ನಲ್ಲಿ ಬ್ಯಾಕ್‌ಲಾಗ್ ಉಳಿದರೆ ವಿದ್ಯಾರ್ಥಿವೇತನ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಸುನಂದಾ ಎಸ್. ಶಿರೂರ ಮಾತನಾಡಿ, 2025-26ನೇ ಸಾಲಿನಲ್ಲಿ ಕಾಲೇಜಿನ 244 ವಿದ್ಯಾರ್ಥಿನಿಯರಿಗೆ ತಲಾ 30 ಸಾವಿರದಂತೆ ಒಟ್ಟು 73.20 ಲಕ್ಷ ದೀಪಿಕಾ ವಿದ್ಯಾರ್ಥಿವೇತನ ಮಂಜೂರಾಗಿದೆ. ವಿದ್ಯಾರ್ಥಿನಿಯರು ನೆರವನ್ನು ಶೈಕ್ಷಣಿಕ ಉದ್ದೇಶಗಳಿಗೆ ಬಳಸಿಕೊಂಡು ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ವಿ.ಆರ್. ದಳವಾಯಿ, ಡಾ. ಬಿ.ಎಂ. ಕೊರಬು, ಆರ್.ಎಸ್. ಜಾಧವ, ಅಮ್ಮಣ್ಣ ಕುರುಂದವಾಡ ಹಾಗೂ ಪುಷ್ಪಾ ಹುಣಶ್ಯಾಳ ಉಪಸ್ಥಿತರಿದ್ದರು.

