ಕುಡಿಗನೂರ ಗ್ರಾಮದ ರಸ್ತೆ ಕಾಮಗಾರಿ ಪೂರ್ಣಕ್ಕೆ ಇನ್ಯಾವ ಮುಹೂರ್ತ? | ಗಡುವು ಮುಗಿದರೂ ಇತ್ತ ಸುಳಿಯದ ಗುತ್ತಿಗೆದಾರ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸಾರ್ವಜನಿಕರು
ಉದಯರಶ್ಮಿ ದಿನಪತ್ರಿಕೆ
ಕಲಬುರಗಿ: ಜಿಲ್ಲೆಯ ಆಫ್ಜಲ್ಪುರ ತಾಲೂಕಿನ ಕುಡಿಗನೂರ ಗ್ರಾಮದ ಪ್ರಮುಖ ರಸ್ತೆ ಕಾಮಗಾರಿ ಆರಂಭವಾಗಿ ನಿಗದಿತ ಗಡುವು ಮುಗಿದು ತಿಂಗಳುಗಳೇ ಕಳೆದರೂ ಇಂದಿಗೂ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತು ಸಾರ್ವಜನಿಕರು ನಿತ್ಯ ನರಕ ಅನುಭವಿಸುವಂತೆ ಆಗಿದೆ.
ಈ ರಸ್ತೆಯುದ್ದಕ್ಕೂ ಬಿದ್ದಿರುವ ಕಲ್ಲುಗಳು, ತೆರೆದ ಗುಂಡಿಗಳು ಹಾಗೂ ಧೂಳಿನಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ಇಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಮಳೆ ಬಂದರೆ ಕೆಸರುಗದ್ದೆಯಾಗಿ ಪರಿವರ್ತನೆಯಾಗುವ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ವ್ಯಾಪಾರಸ್ಥರು ಮತ್ತು ಶಾಲಾ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿತನ: ಆದರೆ ಕಾಮಗಾರಿಗಳ ಅವಧಿ ಮುಗಿದರೂ ಪೂರ್ಣಗೊಳ್ಳದಿರುವದು ಅಧಿಕಾರಿಗಳ ನಿರ್ಲಕ್ಷವೇ ಇಲ್ಲ ಗುತ್ತಿಗೆದಾರ ಅಧಿಕಾರಿಗಳಿಗಿಂತ ಪ್ರಭಲನೆ ಎನ್ನುವ ಪ್ರಶ್ನೆ ತಾಲೂಕಿನ ಜನತೆಗೆ ಕಾಡುತ್ತಿದೆ. ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ದಿವ್ಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದಾಗಿ ಜನಸಾಮಾನ್ಯರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ತೆರಿಗೆ ಕಟ್ಟುವ ಸಾರ್ವಜನಿಕರ ಹಿತಾಸಕ್ತಿಯನ್ನು ಇಲ್ಲಿ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.
ಇನ್ನಾದರೂ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಮಧ್ಯಪ್ರವೇಶಿಸಿ, ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ವರದಿಗೆ ಎಚ್ಚೆತ್ತುಕೊಳ್ಳುವರೇ ಅಧಿಕಾರಿಗಳು
ಕಳೆದ ಬಾರಿ ತಾಲೂಕಿನ ಚಿಂಚೋಳಿ ಗ್ರಾಮದ ರಸ್ತೆಯ ದುಃಸ್ಥಿತಿ ಮತ್ತು ಸಾರ್ವಜನಿಕರ ಗೋಳಿನ ಬಗ್ಗೆ ಕಳೆದ ಬಾರಿ ನಮ್ಮ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಆ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತರಾತುರಿಯಲ್ಲಿ ಕಾಮಗಾರಿ ಆರಂಭಿಸಿದ್ದರು. ಆದರೆ ಅದೇ ಗುತ್ತಿಗೆದಾರ ಹಿಡಿದ ಇನ್ನೊಂದು ರಸ್ತೆ ಬಗ್ಗೆ ವರದಿ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ಈ ಬಾರಿಯ ನಿರೀಕ್ಷೆ
ಕಳೆದ ಬಾರಿಯ ವರದಿಗೆ ತಾತ್ಕಾಲಿಕವಾಗಿ ನಿದ್ದೆಯಿಂದ ಎದ್ದಿದ್ದ ಅಧಿಕಾರಿಗಳು, ಈ ಬಾರಿಯ ಸುದ್ದಿಗಾದರೂ ಪೂರ್ಣ ಪ್ರಮಾಣದಲ್ಲಿ ಎಚ್ಚೆತ್ತು ಬಾಕಿ ಉಳಿದಿರುವ ರಸ್ತೆ ಕಾಮಗಾರಿಯನ್ನು ಮುಗಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

