ಸಬಲೀಕರಣ, ಸಾಮಾಜಿಕ ಸಾಮರಸ್ಯ ಹಾಗೂ ಸಮುದಾಯ ಅಭಿವೃದ್ಧಿಗೆ ‘ಭಾರತ್ ಜೋಡೋ ಯುವ ಸಂಘ’ ಯೋಜನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುವಜನರನ್ನು ಸಂಘಟಿಸಿ, ಅವರಲ್ಲಿರುವ ಶಕ್ತಿ, ಪ್ರತಿಭೆ, ಸೃಜನಶೀಲತೆ ಹಾಗೂ ನಾಯಕತ್ವ ಗುಣಗಳನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘ ಯೋಜನೆ ಜಾರಿಗೆ ತರಲು ಅನುಷ್ಠಾನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಯುವಜನರಿಗೆ ಸ್ಥಳೀಯ ಮಟ್ಟದಲ್ಲೇ ವ್ಯವಸ್ಥಿತ ವೇದಿಕೆ ಕಲ್ಪಿಸಿ, ಅವರನ್ನು ಸಮುದಾಯ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕ್ರೀಡೆ, ಆರೋಗ್ಯ, ಕೌಶಲ್ಯಾಭಿವೃದ್ಧಿ ಹಾಗೂ ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ರಾಜ್ಯದ ಗ್ರಾಮ ಪಂಚಾಯಿತಿಗಳು ಹಾಗೂ ನಗರ ವಾರ್ಡ್ಗಳನ್ನು ಆಧಾರವಾಗಿಟ್ಟುಕೊಂಡು ಒಟ್ಟು ೧೦,೦೦೦ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಿ, ೫೦ ಲಕ್ಷಕ್ಕೂ ಅಧಿಕ ಯುವಕರನ್ನು ಸಂಘಟಿಸುವ ಗುರಿ ಹೊಂದಲಾಗಿದೆ.ಒಂದು ಸಂಘ ರಚನೆಗೆ ಕನಿಷ್ಠ ೧೦೦ ಸದಸ್ಯರು ಅಗತ್ಯ. ಆಧಾರ್ ಆಧಾರಿತ ನೋಂದಣಿ ಮೂಲಕ ಬಿಜೆವೈಎಸ್ ಪೋರ್ಟಲ್, ಮೊಬೈಲ್ ಆ್ಯಪ್ ಹಾಗೂ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೇರಿದಂತೆ ನಾಗರಿಕ ಸೇವಾ ಕೇಂದ್ರಗಳ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಪ್ರತಿ ಸದಸ್ಯರಿಗೆ ₹೧೦ ನೋಂದಣಿ ಶುಲ್ಕ ನಿಗದಿಪಡಿಸಲಾಗಿದ್ದು, ಒಬ್ಬ ಸದಸ್ಯರು ಒಂದು ಸಂಘದಲ್ಲಿ ಮಾತ್ರ ಸದಸ್ಯರಾಗಬಹುದು. ಪ್ರತಿಯೊಂದು ಸಂಘವನ್ನು ಕರ್ನಾಟಕ ಸೊಸೈಟೀಸ್ ನೋಂದಣಿ ಕಾಯ್ದೆ, ೧೯೬೦ರಡಿ ನೋಂದಾಯಿಸುವ ವ್ಯವಸ್ಥೆ ಮಾಡಲಾಗಿದೆ. ಸಂಘವು ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ ಹಾಗೂ ೧೨ ಕಾರ್ಯಕಾರಿ ಸದಸ್ಯರನ್ನು ಒಳಗೊಂಡ ೧೫ ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಹೊಂದಿರಲಿದೆ. ಸಮಿತಿಯಲ್ಲಿ ಮಹಿಳೆಯರು, ಎಸ್ಸಿ-ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಸಾಮಾಜಿಕ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದ್ದು, ಸಂಘದ ಅವಧಿಯನ್ನು ಎರಡು ವರ್ಷಗಳಿಗೆ ನಿಗದಿಪಡಿಸಲಾಗಿದೆ.
ಭಾರತ್ ಜೋಡೋ ಯುವ ಸಂಘಕ್ಕೆ ವಾರ್ಷಿಕ ₹೧೦ ಲಕ್ಷ ಅನುದಾನ ನೀಡಲಾಗುತ್ತದೆ. ಇದರಲ್ಲಿ ₹೨ ಲಕ್ಷ ಬಂಡವಾಳ ಅನುದಾನ ಹಾಗೂ ₹೮ ಲಕ್ಷ ಕಾರ್ಯಕಾರಿ ಅನುದಾನ ಒಳಗೊಂಡಿದ್ದು, ಮೂರು ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಈ ಅನುದಾನವನ್ನು ಕ್ರೀಡೆ ಮತ್ತು ಫಿಟ್ನೆಸ್, ಗ್ರಾಮೀಣ ಕ್ರೀಡಾಕೂಟ, ಯೋಗ ಶಿಬಿರ, ಆರೋಗ್ಯ ಮತ್ತು ಯೋಗಕ್ಷೇಮ, ರಕ್ತದಾನ, ಪೌಷ್ಟಿಕಾಂಶ ಜಾಗೃತಿ, ಕೆರೆ–ಕಲ್ಯಾಣಿ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಸಸಿ ನೆಡುವಿಕೆ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ಯುವಕರಿಗೆ ಡಿಜಿಟಲ್ ಸಾಕ್ಷರತೆ, ವೃತ್ತಿ ಮಾರ್ಗದರ್ಶನ, ಉದ್ಯಮಶೀಲತೆ, ಜೀವನ ಕೌಶಲ್ಯ ಹಾಗೂ ನಾವೀನ್ಯತೆ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ ನೀಡುವ ಮೂಲಕ ಸಂವಿಧಾನದ ಮೌಲ್ಯಗಳು, ಭಾವೈಕ್ಯತೆ ಹಾಗೂ ಸಹೋದರತ್ವದ ಕುರಿತು ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹ, ಅಪೌಷ್ಟಿಕತೆ, ಧೂಮಪಾನ, ಮದ್ಯಪಾನ ಹಾಗೂ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸುವುದರ ಜೊತೆಗೆ ಸೈಬರ್ ಸುರಕ್ಷತೆ, ಸಂಚಾರ ಸುರಕ್ಷತೆ, ವಿಪತ್ತು ನಿರ್ವಹಣೆ, ಕೃಷಿ ಮತ್ತು ಗ್ರಾಮೀಣ ನಾವೀನ್ಯತೆ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಸ್ವಾತಂತ್ರ‍್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಬುದ್ಧ ಜಯಂತಿ ಸೇರಿದಂತೆ ಪ್ರಮುಖ ದಿನಗಳನ್ನು ಜನರ ಸಹಭಾಗಿತ್ವದೊಂದಿಗೆ ಆಚರಿಸುವುದು ಕಡ್ಡಾಯವಾಗಿದೆ.
ಪ್ರತಿಯೊಂದು ಸಂಘವು ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ಸಿದ್ಧಪಡಿಸಿ, ಪ್ರತಿ ತಿಂಗಳು ಸಭೆ ನಡೆಸಬೇಕು. ಕೈಗೊಂಡ ಪ್ರತಿಯೊಂದು ಚಟುವಟಿಕೆಯ ವರದಿ ಹಾಗೂ ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡಬೇಕು. ಸಂಘಗಳ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲು ತರಬೇತುದಾರರನ್ನು ನಿಯೋಜಿಸುವುದರ ಜೊತೆಗೆ, ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಘಗಳನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡುವ ವ್ಯವಸ್ಥೆಯೂ ಇರಲಿದೆ.
ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯದಿಂದ ಗ್ರಾಮ ಮಟ್ಟದವರೆಗೆ ಸಮಗ್ರ ಮೇಲ್ವಿಚಾರಣಾ ವ್ಯವಸ್ಥೆ ರೂಪಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಕಾರ್ಯನಿರ್ವಹಿಸಲಿವೆ.
ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಉಸ್ತುವಾರಿಯಲ್ಲಿ ಉಪ ಕಾರ್ಯದರ್ಶಿಗಳು-ಯೋಜನಾ ನಿರ್ದೇಶಕರು ನೋಡಲ್ ಅನುಷ್ಠಾನಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಥವಾ ನಿಯೋಜಿತ ಅಧಿಕಾರಿಗಳು ಯೋಜನೆಯ ಅನುಷ್ಠಾನಕ್ಕೆ ಸಹಕರಿಸಲಿದ್ದಾರೆ. ನಗರ ಪ್ರದೇಶಗಳಲ್ಲಿ ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಬಿಎ ವ್ಯಾಪ್ತಿಯಲ್ಲಿ ಸಂಬಂಧಿತ ಕಾರ್ಪೊರೇಷನ್ ಆಯುಕ್ತರು ಜವಾಬ್ದಾರಿ ವಹಿಸಲಿದ್ದಾರೆ. ಯೋಜನೆಯನ್ನು ಮಿಷನ್ ಮೋಡ್‌ನಲ್ಲಿ ಜಾರಿಗೊಳಿಸಲು ಯೋಜನೆ ಮೇಲ್ವಿಚಾರಣಾ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, ತಾಂತ್ರಿಕ ಬೆಂಬಲ, ಸಾಫ್ಟ್ವೇವೇರ್ ನಿರ್ವಹಣೆ, ಹಣಕಾಸು ಮೇಲ್ವಿಚಾರಣೆ ಹಾಗೂ ಸಾಮರ್ಥ್ಯವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದೆ. ಒಟ್ಟಾರೆ, ಭಾರತ್ ಜೋಡೋ ಯುವ ಸಂಘವು ಯುವಕರನ್ನು ಕೇವಲ ಒಂದು ಸಂಘಟನೆಯಡಿ ಸೇರಿಸುವ ಯೋಜನೆಯಾಗಿರದೆ, ಯುವಶಕ್ತಿಯನ್ನು ಸಮಾಜದ ಅಭಿವೃದ್ಧಿಯೊಂದಿಗೆ ಜೋಡಿಸುವ ಸಮಗ್ರ ವೇದಿಕೆಯಾಗಿದೆ. ವಿವಿಧ ಜಾತಿ, ಧರ್ಮ, ಭಾಷೆ ಮತ್ತು ಸಮುದಾಯಗಳ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸಾಮಾಜಿಕ ಸಾಮರಸ್ಯ, ಸಹೋದರತ್ವ, ಸಂವಿಧಾನಿಕ ಮೌಲ್ಯಗಳು ಹಾಗೂ ಜವಾಬ್ದಾರಿಯುತ ನಾಗರಿಕತ್ವವನ್ನು ಬೆಳೆಸುವ ಮೂಲಕ ಸಶಕ್ತ ಯುವಜನತೆ, ಬಲಿಷ್ಠ ಸಮುದಾಯ ಹಾಗೂ ವಿಕಾಸಶೀಲ ಮತ್ತು ಸೌಹಾರ್ದಶೀಲ ಕರ್ನಾಟಕ ನಿರ್ಮಾಣಕ್ಕೆ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಜಿಲ್ಲಾ ಪಂಚಾಯತಿಯ ಪ್ರಕಟಣೆ ತಿಳಿಸಿದೆ.

