ಪೋತ್ರಜ ಕುಣಿತ | ಹಲಗೆನಾದದೊಂದಿಗೆ ಅದ್ಧೂರಿ ಮೆರವಣಿಗೆ | ಮಳೆ–ಬೆಳೆ ಸಮೃದ್ಧಿಗೆ ಭಕ್ತರ ಪ್ರಾರ್ಥನೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಆಷಾಢ ಮಾಸದ ಅಂಗವಾಗಿ ಚಡಚಣ ಪಟ್ಟಣದಲ್ಲಿ ಕಟಬು–ಕಟಬರ ಕ್ಷತ್ರಿಯ ಸಮುದಾಯದ ಆರಾಧ್ಯ ದೈವವಾದ ಶ್ರೀ ದುರ್ಗಾದೇವಿ (ಮರಗಮ್ಮ ತಾಯಿ) ಜಾತ್ರಾ ಮಹೋತ್ಸವವು ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು.
ಚಡಚಣ ತಾಲೂಕು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಆಷಾಢ ಮಾಸದ ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ಮರಗಮ್ಮ ತಾಯಿಗೆ ವಿಶೇಷ ಪೂಜೆ, ಕುಂಕುಮಾರ್ಚನೆ, ಅಲಂಕಾರ, ಹರಕೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು, ತಮ್ಮ ಇಷ್ಟಾರ್ಥಗಳು ಈಡೇರಲಿ ಹಾಗೂ ಕುಟುಂಬದಲ್ಲಿ ಸುಖ, ಶಾಂತಿ, ಆರೋಗ್ಯ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ.
ಆಷಾಢ ಮಾಸದಲ್ಲಿ ನಡೆಯುವ ಮರಗಮ್ಮ ತಾಯಿಯ ಜಾತ್ರೆಗೆ ತನ್ನದೇ ಆದ ವಿಶಿಷ್ಟ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವಿದೆ. ಜಾತ್ರೆಯ ನಿಮಿತ್ತ ಕಟಬು–ಕಟಬರ ಕ್ಷತ್ರಿಯ ಸಮುದಾಯದವರು ತಮ್ಮ ಬಂಧು–ಬಳಗ ಹಾಗೂ ಸ್ನೇಹಿತರನ್ನು ಆಹ್ವಾನಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ವರ್ಷವಿಡೀ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಗ್ರಾಮದಲ್ಲಿ ಸುಖ–ಸಮೃದ್ಧಿ ನೆಲೆಸಲಿ ಎಂಬ ಆಶಯದಿಂದ ಅದ್ಧೂರಿಯಾಗಿ ಜಾತ್ರಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಪೋತ್ರಜ ಕುಣಿತ ಹಾಗೂ ಹಲಗೆನಾದದೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಪೋತ್ರಜರು ಕುಣಿಯುತ್ತಿದ್ದರೆ, ಹಲಗೆಯ ಭರ್ಜರಿ ನಾದಕ್ಕೆ ಯುವಕರು ಹಾಗೂ ಭಕ್ತರು ಹೆಜ್ಜೆ ಹಾಕಿದರು. ಮೆರವಣಿಗೆಯು ಭಕ್ತರಲ್ಲಿ ಉತ್ಸಾಹ ಮೂಡಿಸುವುದರ ಜೊತೆಗೆ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು.
ಜಾತ್ರೆಯ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಜಾತ್ರಾ ಸಂಭ್ರಮದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಬಂಧು–ಬಳಗದವರು ಪಾಲ್ಗೊಂಡು ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಕಟಬು–ಕಟಬರ ಕ್ಷತ್ರಿಯ ಕುಲದ ಹಿರಿಯರಾದ ಅಣ್ಣಪ್ಪ ಶಿಂದೆ, ನಾಗಪ್ಪ ಶಿಂದೆ, ಹನುಮಂತ ಕ್ಷತ್ರಿ, ಪ್ರಮುಖ ಮುಖಂಡ ಭೀಮಾಶಂಕರ ಶಿಂದೆ, ತಾಲೂಕು ಅಧ್ಯಕ್ಷ ದತ್ತು ಶಿಂದೆ, ಪತ್ರಕರ್ತ ಲಕ್ಷ್ಮಣ ಶಿಂದೆ, ಉಮಾಶಂಕರ ಕ್ಷತ್ರಿ, ಯುವ ಮುಖಂಡರಾದ ರವಿ ಶಿಂದೆ, ದಶರಥ ಶಿಂದೆ, ಸುಭಾಷ್ ಶಿಂದೆ, ಮಾಜಿ ಪಂಪ್ ಸದಸ್ಯರಾದ ಕುಬೇರ್ ಶಿಂದೆ, ಚಿದಾನಂದ ಶಿಂದೆ, ದಿಗಂಬರ್ ಶಿಂದೆ, ಕಲ್ಲಪ್ಪ ಶಿಂದೆ, ಅಂಬಾದಾಸ್ ಶಿಂದೆ, ಕಾಳಿದಾಸ ಶಿಂದೆ, ಅನಿಲ್ ಶಿಂದೆ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ಭಕ್ತರು ಉಪಸ್ಥಿತರಿದ್ದರು.

