ಸಿಂದಗಿಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇಶದ ಭವಿಷ್ಯವಾಗಿರುವ ಯುವಜನತೆ ವಿವಿಧ ರೀತಿಯ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವಶಕ್ತಿಯನ್ನು ರಕ್ಷಿಸುವುದು ಸರ್ಕಾರದೊಂದಿಗೆ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್. ಪಾಟೀಲ ಹೇಳಿದರು.
ಸಿಂದಗಿ ನಗರದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಪಾಯಕಾರಿ ಮಾದಕ ವಸ್ತುಗಳ ಸೇವನೆಯತ್ತ ಯುವಜನರು ಆಕರ್ಷಿತರಾಗುತ್ತಿರುವುದು ಗಂಭೀರ ವಿಚಾರವಾಗಿದೆ. ಭಾರತ ಯುವ ಸಂಪನ್ಮೂಲವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಸಂಪದ್ಭರಿತ ದೇಶ. ಯುವಜನರ ಆರೋಗ್ಯ, ವ್ಯಕ್ತಿತ್ವ ಹಾಗೂ ಬೌದ್ಧಿಕ ವಿಕಸನಕ್ಕೆ ಆದ್ಯತೆ ನೀಡುವುದು ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿದ ಪ್ರಾಚಾರ್ಯೆ ಡಾ.ಜೆ.ಸಿ.ನಂದಿಕೋಲ ಮಾತನಾಡಿ, ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರು ಯಾವುದೇ ರೀತಿಯ ಮಾದಕ ವಸ್ತುಗಳನ್ನು ಸೇವಿಸುವುದು ದಂಡನೀಯ ಅಪರಾಧವಾಗಿದೆ. ಸಿಗರೇಟ್, ಗುಟಖಾ ಹಾಗೂ ಮದ್ಯದ ಮೇಲೆ ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆ ಸ್ಪಷ್ಟವಾಗಿ ನಮೂದಿಸಿದ್ದರೂ ಅವುಗಳ ಸೇವನೆ ಮುಂದುವರಿಯುತ್ತಿರುವುದು ವಿಷಾದನೀಯ ಎಂದರು.
ಈ ಸಂದರ್ಭದಲ್ಲಿ ಎಸ್.ಎಸ್.ಪಾಟೀಲ ಅವರು ಪ್ರಶಿಕ್ಷಣಾರ್ಥಿಗಳಿಗೆ ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವ ಕುರಿತು ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಪ್ರಮೀಳಾ ಪಾಟೀಲ, ಶಿವಕುಮಾರ ಶಿವಸಿಂಪಗೇರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಉಪನ್ಯಾಸಕ ಸುಧಾಕರ ಚವ್ಹಾಣ, ಪ್ರಶಾಂತ ಕುಲಕರ್ಣಿ, ಆರ್.ಎ.ಹಾಲಕೇರಿ, ಭಾಗ್ಯಜ್ಯೋತಿ ದಸ್ಮಾ, ನಾಜಿಯಾ ಮುಲ್ಲಾ, ಶ್ವೇತಾ ರೆಬಿನಾಳ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು. ಉಪನ್ಯಾಸಕ ದಾನಯ್ಯ ಮಠಪತಿ ಕಾರ್ಯಕ್ರಮ ನಿರ್ವಹಿಸಿದರು.

