ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 2026ರ ನಾನಾ ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಗಮನಾರ್ಹ ಸಾಧನೆ ದಾಖಲಿಸುವ ಮೂಲಕ ಬಿಎಲ್‌ಡಿಇ (ಡೀಮ್ಡ್ ವಿಶ್ವವಿದ್ಯಾಲಯ), ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಈ ಸಾಧನೆಗಳು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ, ಅತ್ಯುತ್ತಮ ಬೋಧನೆ ಮತ್ತು ಕಲಿಕೆ, ಸಂಶೋಧನೆ ಹಾಗೂ ನಾವೀನ್ಯತೆ, ಆರೋಗ್ಯ ಸೇವೆಗಳು, ಕ್ಲಿನಿಕಲ್ ತರಬೇತಿ, ಆಧುನಿಕ ಮೂಲಸೌಕರ್ಯ ಹಾಗೂ ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣದತ್ತ ಇರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
ರಾಷ್ಟ್ರೀಯ ಮಾಧ್ಯಮ ಶ್ರೇಯಾಂಕಗಳು- 2026:
2026ರ ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯವು ಇಂಡಿಯಾ ಟುಡೇ–ಎಂ.ಡಿ.ಆರ್.ಎ ಶ್ರೇಯಾಂಕದಲ್ಲಿ 15ನೇ ಸ್ಥಾನ, ಔಟ್‌ಲುಕ್–ಐಕೇರ್ ಶ್ರೇಯಾಂಕದಲ್ಲಿ 10ನೇ ಸ್ಥಾನ, ಹಾಗೂ ದಿ ವೀಕ್–ಹನ್ಸಾ ಶ್ರೇಯಾಂಕದಲ್ಲಿ 5ನೇ ಸ್ಥಾನ ಪಡೆದು ತನ್ನ ಶೈಕ್ಷಣಿಕ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.
ಇದೇ ವೇಳೆ, ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಸಹ ಉತ್ತಮ ಸಾಧನೆ ಮಾಡಿದ್ದು, ಔಟ್‌ಲುಕ್–ಐಕೇರ್ ಶ್ರೇಯಾಂಕದಲ್ಲಿ 9ನೇ ಸ್ಥಾನ ಹಾಗೂ ದಿ ವೀಕ್–ಹನ್ಸಾ ಶ್ರೇಯಾಂಕದಲ್ಲಿ 17ನೇ ಸ್ಥಾನ ಗಳಿಸಿ ದೇಶದ ಪ್ರಮುಖ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ತನ್ನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿದೆ.
ಅದೇ ರೀತಿ, ಔಟ್‌ಲುಕ್-ಐಕೇರ್ ರಾಷ್ಟ್ರೀಯ ಶ್ರೇಯಾಂಕದಲ್ಲಿ, ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯವು ಭಾರತದ ಅಗ್ರ 20 ಕಾಲೇಜುಗಳಲ್ಲಿ 4 ನೇ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೇ ಶ್ರೀ ಸಂಗನಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜು ಭಾರತದ ಅಗ್ರ 20 ಕಾಲೇಜುಗಳಲ್ಲಿ 2 ನೇ ಸ್ಥಾನವನ್ನು ಪಡೆದಿದೆ.
ಐಐಆರ್‌ಎಫ್ (IIRF) – 2026: ಅಂತರರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ (IIRF)–2026ರಲ್ಲಿ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯವು ರಾಷ್ಟ್ರೀಯ ಮಟ್ಟದಲ್ಲಿ 65ನೇ ಸ್ಥಾನ, ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ 45ನೇ ಸ್ಥಾನ ಹಾಗೂ ಕರ್ನಾಟಕದಲ್ಲಿ 7ನೇ ಸ್ಥಾನ ಗಳಿಸಿದೆ.
ಶ್ರೀ ಬಿ. ಎಂ. ಪಾಟೀಲ್ ವೈದ್ಯಕೀಯ ಕಾಲೇಜು ರಾಷ್ಟ್ರೀಯ ಮಟ್ಟದಲ್ಲಿ 115ನೇ ಸ್ಥಾನ, ರಾಜ್ಯದಲ್ಲಿ 29 ನೇ ಸ್ಥಾನ ಮತ್ತು ದಕ್ಷಿಣ ಭಾರತದಲ್ಲಿ 70 ನೇ ಸ್ಥಾನ ಪಡೆದುಕೊಂಡಿದೆ. ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜು ರಾಷ್ಟ್ರೀಯ ಮಟ್ಟದಲ್ಲಿ 50 ನೇ ಸ್ಥಾನ, ರಾಜ್ಯದಲ್ಲಿ 11 ನೇ ಸ್ಥಾನ ಮತ್ತು ದಕ್ಷಿಣ ಭಾರತದಲ್ಲಿ 30 ನೇ ಸ್ಥಾನ ಗಳಿಸಿದೆ.
ರಾಷ್ಟ್ರೀಯ ಹಸಿರು ವಿಶ್ವವಿದ್ಯಾಲಯ ಶ್ರೇಯಾಂಕ- 2026:
2026ರ ರಾಷ್ಟ್ರೀಯ ಹಸಿರು ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಬಿ.ಎಲ್.ಡಿ.ಇ(ಡೀಮ್ಡ್ ವಿವಿ) 7ನೇ ಸ್ಥಾನ ಪಡೆದು ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ವಿಶ್ವವಿದ್ಯಾಲಯವು 100 ಅಂಕಗಳಲ್ಲಿ 93.6 ಅಂಕಗಳನ್ನು ಗಳಿಸಿ ಪ್ರತಿಷ್ಠಿತ “ಗೋಲ್ಡ್ ರೇಟಿಂಗ್” ಅನ್ನು ತನ್ನದಾಗಿಸಿಕೊಂಡಿದೆ.
ಈ ಮಾನ್ಯತೆಯು ಪರಿಸರ ಸಂರಕ್ಷಣೆ, ಹಸಿರು ಕ್ಯಾಂಪಸ್ ಅಭಿವೃದ್ಧಿ, ಜವಾಬ್ದಾರಿಯುತ ಸಂಪನ್ಮೂಲ ಬಳಕೆ ಹಾಗೂ ಸುಸ್ಥಿರ ಸಾಂಸ್ಥಿಕ ಕಾರ್ಯವೈಖರಿಯತ್ತ ವಿಶ್ವವಿದ್ಯಾಲಯದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ವಿಶ್ವವಿದ್ಯಾಲಯ ದಾಖಲಿಸಿರುವ ಈ ಸಾಧನೆಗಳು ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ, ನಾವೀನ್ಯತೆ, ಸುಸ್ಥಿರತೆ ಹಾಗೂ ಸಾಂಸ್ಥಿಕ ಅಭಿವೃದ್ಧಿಯಲ್ಲಿ ಶ್ರೇಷ್ಠತೆಯ ನಿರಂತರ ಅನ್ವೇಷಣೆಯನ್ನು ಪ್ರತಿಬಿಂಬಿಸುತ್ತಿದ್ದು, ಈ ಪ್ರದೇಶದ ಪ್ರಮುಖ ಬಹುಶಿಸ್ತೀಯ ಉನ್ನತ ಶಿಕ್ಷಣ ಸಂಸ್ಥೆಯಾಗಿ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಸ್ಥಾನವನ್ನು ಮತ್ತಷ್ಟು ಬಲಪಡಿಸಿವೆ.
ಈ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ ಹಾಗೂ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಶಾಸಕ ಸುನೀಲಗೌಡ ಬಿ. ಪಾಟೀಲ ಹಾಗೂ ಡೀಮ್ಡ್ ವಿವಿ ಕುಲಾಧಿಪತಿ ಬಿ.ಎಂ.ಪಾಟೀಲ ಅವರು ವಿಶ್ವವಿದ್ಯಾಲಯದ ಅಧಿಕಾರಿಗಳು, ಮತ್ತು ಆಡಳಿತ ಸಿಬ್ಬಂದಿಯನ್ನು ಅಭಿನಂದನೆ ಸಲ್ಲಿಸಿದ್ದಾರೆ.

