ಪ್ರಥಮ ಬಾರಿಗೆ ವಿದ್ಯುತ್ ಉತ್ಪಾದನೆಯೂ ಶುರು | ರಾತ್ರಿ ನೀರಿನ ಹೊರಹರಿವು ಹೆಚ್ಚಳ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ನಾರಾಯಣಪುರ ಜಲಾಶಯಕ್ಕೆ ಕುಡಿಯುವ ನೀರಿಗಾಗಿ ಕಾಲುವೆಗೆ ನೀರು ಹರಿಸುವ ಉದ್ದೇಶದಿಂದ ಆಲಮಟ್ಟಿ ಜಲಾಶಯದಿಂದ ಶನಿವಾರ ಮೊದಲ ಬಾರಿಗೆ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ೩,೫೦೦ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ. ಇದರೊಂದಿಗೆ ಪ್ರಸಕ್ತ ಹಂಗಾಮಿನಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯೂ ಆರಂಭವಾಗಿದೆ. ಹಂತ ಹಂತವಾಗಿ ನೀರನ್ನು ಬಿಡಬೇಕಾಗಿರುವುದರಿಂದ ರಾತ್ರಿ ೮ ಗಂಟೆಯ ನಂತರ ಹೊರಹರಿವನ್ನು ೮,೦೦೦ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಆಲಮಟ್ಟಿ ಜಲಾಶಯದ ಅಧಿಕಾರಿಗಳು ತಿಳಿಸಿದರು.
ಜಲಾಶಯದ ಮಟ್ಟ
ಗರಿಷ್ಠ ೫೧೯.೬೦ ಮೀಟರ್ ಎತ್ತರದಲ್ಲಿ ೧೨೩.೦೮೧ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ ಸಂಜೆ ೫೧೭.೪೨ ಮೀಟರ್ ಎತ್ತರದಲ್ಲಿ ೮೯.೮ ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಒಳಹರಿವಿನ ಪ್ರಮಾಣ ೬,೦೯೧ ಕ್ಯುಸೆಕ್ ಇತ್ತು.
ವಿದ್ಯುತ್ ಉತ್ಪಾದನೆ ಆರಂಭ
ಆಲಮಟ್ಟಿ ಜಲಾಶಯದ ಬಲಭಾಗದಲ್ಲಿರುವ ಜಲ ವಿದ್ಯುದಾಗಾರದ ೫೫ ಮೆಗಾವಾಟ್ ಸಾಮರ್ಥ್ಯದ ಒಂದು ಘಟಕದಿಂದ ಶನಿವಾರ ೩,೫೦೦ ಕ್ಯುಸೆಕ್ ನೀರನ್ನು ನದಿಗೆ ಹರಿಸುವ ಮೂಲಕ ೨೫ ಮೆಗಾವಾಟ್ ವಿದ್ಯುತ್ ಉತ್ಪಾದನೆ ಆರಂಭವಾಯಿತು. ರಾತ್ರಿ ೮ ಗಂಟೆಗೆ ಹೊರಹರಿವು ೮,೦೦೦ ಕ್ಯುಸೆಕ್‌ಗೆ ಹೆಚ್ಚಿದ್ದರಿಂದ ಇನ್ನೊಂದು ಘಟಕವೂ ಆರಂಭಗೊಂಡು ಒಟ್ಟಾರೆ ೭೦ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
“ಆಲಮಟ್ಟಿ ವಿದ್ಯುದಾಗಾರದಲ್ಲಿ ಶನಿವಾರದಿಂದ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ. ಈ ವರ್ಷ ಘಟಕಕ್ಕೆ ೫೨೦ ದಶಲಕ್ಷ ಯುನಿಟ್ ಉತ್ಪಾದನೆಯ ಗುರಿ ನೀಡಲಾಗಿದೆ”
– ಚಂದ್ರಶೇಖರ ದೊರೆ
ಸೂಪರಿಂಟೆಂಡೆಂಟ್ ಎಂಜಿನಿಯರ್, ಕೆಪಿಸಿಎಲ್, ಆಲಮಟ್ಟಿ

