ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕಾದರೆ, ನ್ಯಾಯತವಾಗಿ ಬದುಕಬೇಕಾದರೆ, ಮದ್ಯಪಾನ ತ್ಯಜಿಸಬೇಕು. ಆಗ ನಾವು ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಮದ್ಯ ಮಾರುವವನು ಶ್ರೀಮಂತರಾದರೆ, ಮದ್ಯ ಕುಡಿಯುವವರು ಬಡವರಾಗಿ ಬೀದಿಪಾಲಾಗುತ್ತಾರೆ. ಹೀಗಾಗಿ, ಮದ್ಯಪಾನ ನಿಲ್ಲಿಸಬೇಕೆಂದು ಸಬ್ ಇನ್ಸ್ಪೆಕ್ಟರ್ ಚಿಕ್ಕನಾಯಕ ಹೇಳಿದರು.
ಪಟ್ಟಣದ ಬಿರ್ಸಾ ಮುಂಡಾ ಭವನದಲ್ಲಿ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ವತಿಯಿಂದ ಹಮ್ಮಿಕೊಂಡಿದ್ದ ಮದ್ಯವರ್ಧನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಮದ್ಯ ಸೇವನೆಯಿಂದ ಜೀವನ ನರಕವಾಗುತ್ತದೆ. ಸಮಾಜದಲ್ಲಿ ಗೌರವ ಯುತವಾಗಿ ಬದುಕಲು ಕಷ್ಟವಾಗುತ್ತದೆ. ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿನ್ನಡೆ ಉಂಟಾಗುತ್ತದೆ. ಹೀಗಾಗಿ ನೆಮ್ಮದಿ ಜೀವನಕೆ ಕುಡಿತ ಚಟದಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಹೇಳಿದರು.
ಅಬಕಾರಿ ಇಲಾಖೆಯ ಉಪನಿರೀಕ್ಷಕ ರವಿ ಮಾತನಾಡಿ, ಸರ್ಕಾರವೇ ಮದ್ಯ ಮಾರಾಟ ಮಾಡಲು ಲೈಸೆನ್ಸ್ ಕೊಡುತ್ತದೆ ಅಂತೇಳಿ ಕುಡಿತವನ್ನೇ ಅಭ್ಯಾಸವನ್ನಾಗಿ ಮಾಡಿಕೊಳ್ಳಬಾರದು. ಮಿತವಾಗಿ ಮದ್ಯ ಸೇವನೆ ಮಾಡಿದಾಗ ಯಾವುದೇ ಸಮಸ್ಯೆ ಬರುವುದಿಲ್ಲ, ಅದು ಅತಿಯಾದಾಗ ಮಾತ್ರ ಸಮಸ್ಯೆಗಳು ಉಂಟಾಗುತ್ತೆ. ಆರೋಗ್ಯ ಹದಗೆಡುತ್ತೆ. ಸಮಾಜದಲ್ಲಿ ನಾನಾ ತೊಂದರೆಗಳು ಉಂಟಾಗುತ್ತವೆ. ಆದ್ದರಿಂದ ನಾವು ಸಂಪಾದಿಸಿದ ಹಣವನ್ನು ಕುಡಿತಕ್ಕೆ ಬಳಸದೆ ಮಕ್ಕಳ ಶಿಕ್ಷಣ ಹಾಗೂ ಅವರ ಭವಿಷ್ಯಕ್ಕಾಗಿ ಬಳಕೆ ಮಾಡಬೇಕು ಎಂದು ಹೇಳಿದರು.
ಈ ವೇಳೆ ತಾಲೂಕು ಲಾಯರ್ ಅಸೋಸಿಯೇಷನ್ ಅಧ್ಯಕ್ಷ ನಾಗೇಶ್, ಹಿರಿಯ ಪತ್ರಕರ್ತ ಎಡತೊರೆ ಮಹೇಶ್, ಆಪ್ತ ಸಮಾಲೋಚಕರಾದ ಭರತ್ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಕಾರ್ಯಕ್ರಮದ ನಿರ್ದೇಶಕರಾದ ಡಾ. ಡೆನ್ನಿಸ್ ಚೌಹಾಣ್, ಗಿರಿಜನ ಅಭಿವೃದ್ಧಿ ಚಟುವಟಿಕೆ ವ್ಯವಸ್ಥಾಪಕರಾದ ಶಂಕರ್ ಬಿ ವಿ, ಶಿವಕುಮಾರ್ , ಭಾಗ್ಯಮ್ಮ, ರವಿಕುಮಾರ್, ಸತೀಶ್, ಸಿದ್ದೇಶ್, ಸುಮಿತ್ರ, ಕುಮಾರ್, ಗಣೇಶ್, ಸವಿತಾ ಸೇರಿದಂತೆ ಶಿಬಿರಾರ್ಥಿಗಳ ಪೋಷಕರು ಭಾಗವಹಿಸಿದ್ದರು.

