ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೂರ್‌ನಲ್ಲಿ ಹೈನುಗಾರಿಕೆ ಸಮಾಲೋಚನಾ ಸಭೆ | ಮಹಾಂತೇಶ್ ವಿ.ಎ. ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ವತಿಯಿಂದ ಚಡಚಣ ತಾಲೂಕಿನ ಲೋಣಿ ಬಿ.ಕೆ. ವಲಯದ ತದ್ದೇವಾಡಿ ಕಾರ್ಯಕ್ಷೇತ್ರದ ಕೆರೂರ್ ಗ್ರಾಮದಲ್ಲಿ ಹೈನುಗಾರಿಕೆ ಸಮಾಲೋಚನಾ ಸಭೆಯನ್ನು ಆಯೋಜಿಸಿ ರೈತರು ಹಾಗೂ ಮಹಿಳೆಯರಿಗೆ ಕೃಷಿ ಮತ್ತು ಹೈನುಗಾರಿಕೆ ಕುರಿತ ವಿವಿಧ ಯೋಜನೆಗಳ ಮಾಹಿತಿ ಶನಿವಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಲಯದ ಮೇಲ್ವಿಚಾರಕರಾದ ಮಹಾಂತೇಶ್ ವಿ.ಎ., ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಪ್ರತಿಯೊಂದು ಕುಟುಂಬವೂ ಕೃಷಿ ಆಧಾರಿತ ಚಟುವಟಿಕೆಗಳತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದರು. ಹೈನುಗಾರಿಕೆ, ದ್ವಿದಳ ಬೆಳೆಗಳ ಬೆಳವಣಿಗೆ, ಹೊಲ ಹದಗೊಳಿಸುವಿಕೆ, ಬೋರ್‌ವೆಲ್ ಕೊರೆಸುವುದು, ಆಕಳು ಹಾಗೂ ಆಡು ಸಾಕಾಣಿಕೆ, ದ್ರಾಕ್ಷಿ ಸಸಿ ನಾಟಿ ಹಾಗೂ ದ್ರಾಕ್ಷಿ ತೋಟದ ಆರೈಕೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಹೈನುಗಾರಿಕೆ ಸಮಾಲೋಚನಾ ಸಭೆಗಳ ಮೂಲಕ ರೈತರಲ್ಲಿ ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಅರಿವು ಮೂಡಿಸಿ, ಹೈನುಗಾರಿಕೆಯನ್ನು ಲಾಭದಾಯಕ ಸ್ವಉದ್ಯೋಗವಾಗಿ ರೂಪಿಸಲು ಯೋಜನೆ ಉತ್ತೇಜನ ನೀಡುತ್ತಿದೆ ಎಂದು ಅವರು ಹೇಳಿದರು.
ಕೃಷಿ ಮೇಲ್ವಿಚಾರಕರಾದ ಸುದೀಪ್ ಮಾತನಾಡಿ, ರೈತ ಮಹಿಳೆಯರು ಹೈನುಗಾರಿಕೆಯನ್ನು ಸ್ವಉದ್ಯೋಗವನ್ನಾಗಿ ರೂಪಿಸಿಕೊಳ್ಳುವ ಅವಕಾಶಗಳ ಬಗ್ಗೆ ವಿವರಿಸಿದರು. ಪಶುಗಳ ಆರೋಗ್ಯ, ಚಿಕಿತ್ಸೆ, ಸಮರ್ಪಕ ಸಂಗೋಪನೆ ಹಾಗೂ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ವತಿಯಿಂದ ದೊರೆಯುವ ಸೌಲಭ್ಯಗಳು ಮತ್ತು ಸಹಾಯಧನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಹೈನುಗಾರಿಕೆ ಸ್ವಉದ್ಯೋಗ ಸದಸ್ಯ ರಮೇಶ ವಾಘಮೋರೆ ಮಾತನಾಡಿ, ಹೈನುಗಾರಿಕೆಯಿಂದ ಉತ್ತಮ ಆದಾಯ ಗಳಿಸುವ ಸಾಧ್ಯತೆಗಳ ಜೊತೆಗೆ ಯೋಜನೆಯಡಿ ದೊರೆಯುವ ಸಾಲ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಸುಬಾಂಗಿ ವಾಘಮೋರೆ, ಸ್ಥಳೀಯ ಸೇವಾ ಪ್ರತಿನಿಧಿ ವಿಮಲಾ ಗೌಡನೂರ, ರೈತ ಮಹಿಳೆಯರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

