ಉದಯರಶ್ಮಿ ದಿನಪತ್ರಿಕೆ
ತಿಕೋಟಾ: “ಗುರ್ಜಿ, ಗುರ್ಜಿ ಹಳ್ಳಾಡಿ ಬಂದೆ, ಹಳ್ಳಕೊಳ್ಳ ತಿರಿಗ್ಯಾಡಿ ಬಂದೆ, ಕಾರ ಮಳೆಯೋ ಕಪ್ಪತ್ತು ಮಳೆಯೋ, ಸುರಿಸುರಿ ಸುರಿಯೋ ಮಳೆಯೋ”.. ಎಂದು ಹಳ್ಳಿಗಳಲ್ಲಿ ಮಹಿಳೆಯರು ಮಳೆಗಾಗಿ ಮನೆ ಮನೆ ತಿರುಗುತ್ತಾ ಗುರ್ಜಿ ಹೊತ್ತು ಪ್ರಾರ್ಥನೆ ಸಲ್ಲಿಸಿದರು.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ಶನಿವಾರ ಜಯಶ್ರೀ ಗಿಡ್ನವರ ಮಹಿಳೆಯ ತಲೆ ಮೇಲೆ ತವೆ ಇಟ್ಟು ಅದರ ಮೇಲೆ ಜಿಗಟು ಮಣ್ಣಿನಿಂದ ತಯಾರಿಸಿದ ಗುರ್ಜಿ ಮಾಡಿದ್ದರಿ. ಗುರ್ಜಿ ಹೊತ್ತ ಮಹಿಳೆಯು ಗುರ್ಜಿ ಗುರ್ಜಿ ಎಂದು ಹಾಡು ಹೇಳುತ್ತಾ ಗ್ರಾಮದ ಎಲ್ಲ ಮನೆ ಮುಂದೆ ಹೋಗಿ ನಿಲ್ಲುತ್ತಾರೆ. ಆಗ ಮನೆಯವರು ಬಂದು ಗುರ್ಜಿ ಹೊತ್ತವಳ ತಲೆ ಮೇಲೆ ನೀರು ಸುರಿದು ಗುರ್ಜಿ ಪೂಜೆ ಮಾಡಿ ಬೇಗ ಮಳೆ ಬಂದು ಭೂಮಿ ತಾಯಿ ತಂಪೆರಗಲಿ ಎಂದು ಪೂಜೆ ಮಾಡುತ್ತಾರೆ.
ಮಳೆ ಬಾರದೆ ಇದ್ದಾಗ ಪೂರ್ವಜರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯರ ಕಾಲದಿಂದಲೂ ಆಚರಣೆಯಲ್ಲಿರುವ ಗುರ್ಜಿಪೂಜೆ ಹಳ್ಳಿಗಳಲ್ಲಿ ಮಹಿಳೆಯರು ವಿಶಿಷ್ಟ್ಟವಾಗಿ ಆಚರಣೆ ಮಾಡುತ್ತಾರೆ. ಈ ರೀತಿ ಪೂಜೆ ಮಾಡುವುದರಿಂದ ಮಳೆ ಆಗುವ ನಂಬಿಕೆ ಹಳ್ಳಿಯ ಜನರಲ್ಲಿದೆ.
ಮಳೆ ಬರುವ ನಂಬಿಕೆಯಿಂದ ರೈತಾಪಿ ಜನ ಬಿತ್ತನೆ ಮಾಡಿದ್ದು, ಈಗ ಮಳೆಯ ಆಗಮನಕ್ಕಾಗಿ ರೈತರು ಆಕಾಶದೆತ್ತರಕ್ಕೆ ನೋಡುವಂತಾಗಿದೆ. ಮಳೆ ಇಲ್ಲದೇ ಜನ ಜಾನುವಾರಕ್ಕೂ ಸಹ ಸಂಕಟ ಎದುರಾಗಿದ್ದರಿಂ ಮಹಿಳೆಯರು ಗುರ್ಜಿ ಪೂಜೆಯ ಮೊರೆ ಹೋಗಿದ್ದಾರೆ.
ಜಯಶ್ರಿ ಗಿಡ್ನವರ, ಶ್ರೀದೇವಿ ಕಾಳೆ, ಮಾಜನ ಮುಲ್ಲಾ, ಕಾಶಿಬಾಯಿ ಬಗಲಿ, ಸುನಂದಾ ದೊಡಮನಿ, ಸೈರಾ ಮುಲ್ಲಾ, ಸವಿತಾ ಕರ್ಪೆ, ಬೌರವ್ವ ದಂಡಿನ, ಕಾಂತಾ ಝಂಡೆ, ಶೃತಿ ಇಳಗೇರಿ ಹಾಗೂ ಗ್ರಾಮದ ಮಹಿಳೆಯರು ಇದ್ದರು.

