ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೊಲ್ಹಾರ ತಾಲೂಕಿನ ಬಾಗಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಸವಲಿಂಗ ಕುಂಬಾರ ಅವರು ಎಸ್‌ಐಆರ್ (Special Intensive Revision) ಕಾರ್ಯವನ್ನು ಕೇವಲ ೧೩ ದಿನಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಗಮನ ಸೆಳೆದಿದ್ದಾರೆ.
ತಾಲೂಕಿನ ಮತಗಟ್ಟೆ ಸಂಖ್ಯೆ ೧೯೦ರಲ್ಲಿ ಒಟ್ಟು ೪೮೯ ಮತದಾರರ ಮಾಹಿತಿಯನ್ನು ಸಮಗ್ರವಾಗಿ ಪರಿಷ್ಕರಿಸುವ ಜವಾಬ್ದಾರಿಯನ್ನು ಹೊತ್ತಿದ್ದ ಅವರು, ಕಡಿಮೆ ಅವಧಿಯಲ್ಲಿ ನಿಖರವಾಗಿ ಕಾರ್ಯ ಪೂರ್ಣಗೊಳಿಸಿರುವುದು ವಿಶೇಷವಾಗಿದೆ.
ಈ ಸಾಧನೆಯನ್ನು ಗುರುತಿಸಿ ತಹಶೀಲ್ದಾರ ಎಸ್.ಎಸ್. ಮ್ಯಾಗೇರಿ ಅವರು ತಮ್ಮ ಕಚೇರಿಗೆ ಕರೆಯಿಸಿಕೊಂಡು ಬಸವಲಿಂಗ ಕುಂಬಾರರನ್ನು ಸನ್ಮಾನಿಸಿ ಅಭಿನಂದಿಸಿದರು. ಅವರ ಕಾರ್ಯಕ್ಕೆ ಜಿಲ್ಲಾ ಆಡಳಿತವೂ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಉಪತಹಶೀಲ್ದಾರ ಕೆ.ಎಂ. ನಧಾಪ್, ಪಿ.ಎಸ್. ಹುಡೇದ, ಭಾಗ್ಯಶ್ರೀ ಪಾಟೀಲ, ಶ್ರೀಶೈಲ ವಾಲಿಕಾರ, ಮಂಜುನಾಥ ಕಲ್ಲೂರ, ಬಿ.ಎಸ್. ಮಮದಾಪೂರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

