ರೈತರ ಜಮೀನಿನಲ್ಲೇ ರಸ್ತೆ ಕಾಮಗಾರಿ? | ಕೂಡಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟದ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ–ತಾರನಾಳ ರಸ್ತೆ ಕಾಮಗಾರಿ ವೇಳೆ ಬಿದರಕುಂದಿ ಹಾಗೂ ಕುಂಟೋಜಿ ಗ್ರಾಮಗಳ ಗಡಿಯನ್ನು ಸಮರ್ಪಕವಾಗಿ ಗುರುತಿಸದೇ ಕಾಮಗಾರಿ ಆರಂಭಿಸಿರುವ ಪರಿಣಾಮ ಹಲವು ರೈತರ ಜಮೀನಿಗೆ ಅತಿಕ್ರಮಣವಾಗಿದೆ ಎಂದು ಬಾಧಿತ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗಡಿ ಗುರುತಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ರೈತರಾದ ಶಿವಣ್ಣ ಚಿರಲದಿನ್ನಿ, ಶ್ರೀಕಾಂತ ಕಡೂರ, ಲಕ್ಷ್ಮಣ ಕಡೂರ, ಶಾಂತಗೌಡ ಬಿರಾದಾರ ಹಾಗೂ ಸಂಗಪ್ಪ ಸರೂರ ಮಾತನಾಡಿ, ಈಗಾಗಲೇ ಮಳೆ ಕೊರತೆ ಹಾಗೂ ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇದೀಗ ರಸ್ತೆ ಕಾಮಗಾರಿಯಿಂದ ಮತ್ತಷ್ಟು ತೊಂದರೆ ಉಂಟಾಗಲಿದೆ ಎಂದು ಆರೋಪಿಸಿದರು. ಕಾಮಗಾರಿ ಆರಂಭಿಸುವ ಮೊದಲು ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಗಳ ಗಡಿ ಹಾಗೂ ಜಮೀನುಗಳ ಗಡಿಯನ್ನು ನಿಖರವಾಗಿ ಗುರುತಿಸಬೇಕಾಗಿತ್ತು. ಆದರೆ ಯಾವುದೇ ಪೂರ್ವ ಸರ್ವೆ ನಡೆಸದೇ, ರೈತರಿಗೆ ಮಾಹಿತಿ ನೀಡದೇ ಮತ್ತು ನೋಟಿಸ್ ಜಾರಿ ಮಾಡದೇ ಏಕಾಏಕಿ ಹೊಲಗಳಿಗೆ ನುಗ್ಗಿ ರಸ್ತೆಗಾಗಿ ಲೈನ್‌ಔಟ್ ಹಾಕಲಾಗಿದೆ ಎಂದು ದೂರಿದರು.
ಈ ಬಗ್ಗೆ ಪ್ರಶ್ನಿಸಲು ಹೋದಾಗ ಗುತ್ತಿಗೆದಾರರ ಸಿಬ್ಬಂದಿ ಹಾಗೂ ಸಂಬಂಧಪಟ್ಟವರು ರೈತರೊಂದಿಗೆ ಅಸಭ್ಯವಾಗಿ ವರ್ತಿಸಿ, ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಿದರು.
ತಮ್ಮ ಹಕ್ಕಿನ ಜಮೀನನ್ನು ರಕ್ಷಿಸಿಕೊಳ್ಳಲು ಮುಂದಾದ ರೈತರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಒತ್ತಡಕ್ಕೆ ಒಳಪಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಅಭಿವೃದ್ಧಿ ಕಾಮಗಾರಿಗಳಿಗೆ ವಿರೋಧಿಗಳಲ್ಲ. ಆದರೆ ರೈತರ ಜಮೀನಿಗೆ ಅನ್ಯಾಯವಾಗದಂತೆ ಕಾನೂನುಬದ್ಧವಾಗಿ ಗಡಿ ಗುರುತಿಸಿ, ಸೂಕ್ತ ಪರಿಹಾರ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕವೇ ಕಾಮಗಾರಿ ನಡೆಸಬೇಕು. ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಏಕಪಕ್ಷೀಯವಾಗಿ ಕಾಮಗಾರಿ ನಡೆಸುವುದು ಸರಿಯಲ್ಲ” ಕೂಡಲೇ ಜಿಲ್ಲಾಡಳಿತ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಸಂಬAಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜಮೀನುಗಳ ಗಡಿಯನ್ನು ವೈಜ್ಞಾನಿಕವಾಗಿ ಗುರುತಿಸಿ, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದಲ್ಲಿ ಬಿದರಕುಂದಿ, ಕುಂಟೋಜಿ ಸೇರಿದಂತೆ ಸುತ್ತಮುತ್ತಲಿನ ರೈತರೆಲ್ಲ ಒಗ್ಗೂಡಿ ಸಂಬಂಧಿಸಿದ ಇಲಾಖೆಯ ಕಚೇರಿ ಎದುರು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಕಾರ್ತಿಕ ನಾಯಕ, ಭೀಮಣ್ಣ ಸುತುಗುಂಡರ, ಬಸಪ್ಪ ಬಿಜ್ಜೂರ, ಮುರಿಗೆಪ್ಪ ಕಡೂರ ಮತ್ತೀತರರು ಇದ್ದರು.

