ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ. ವಿಭಾಗ, ಆರ್ಯನ್ ಡಿಜಿಟಲ್ ಲ್ಯಾಬ್, ವಿಜಯಪುರ ಹಾಗೂ ನೈಕಾನ್ ಸ್ಕೂಲ್ ಇಂಡಿಯಾ ಇವರ ಸಹಯೋಗದಲ್ಲಿ ನೈಕಾನ್ ಮಿರರ್‌ಲೆಸ್ ತಂತ್ರಜ್ಞಾನ ಕುರಿತು ವಿಶೇಷ ಕಾರ್ಯಾಗಾರ ಜುಲೈ 14 ರಂದು ಮಂಗಳವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30ರ ವರೆಗೆ ನಡೆಯಲಿದೆ.
ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ನೈಕಾನ್‌ನ ಅತ್ಯಾಧುನಿಕ ಮಿರರ್‌ಲೆಸ್ ಕ್ಯಾಮೆರಾ ತಂತ್ರಜ್ಞಾನದ ಕುರಿತು ಪ್ರಾಯೋಗಿಕ ಅನುಭವವನ್ನು ನೀಡಲಾಗುವುದು. ಛಾಯಾಗ್ರಹಣದ ಸೈದ್ಧಾಂತಿಕ ಜ್ಞಾನ ಮತ್ತು ಉದ್ಯಮದಲ್ಲಿನ ಪ್ರಾಯೋಗಿಕ ಬಳಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳು ಮತ್ತು ಛಾಯಾಗ್ರಹಣ ಆಸಕ್ತರಿಗೆ ಆಧುನಿಕ ಇಮೇಜಿಂಗ್ ತಂತ್ರಜ್ಞಾನಗಳ ಬಗ್ಗೆ ಸಮಗ್ರ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಈ ವಿಶೇಷ ತರಬೇತಿಯನ್ನು ನೈಕಾನ್‌ನ ಖ್ಯಾತ ಕಂಟೆಂಟ್ ಕ್ರಿಯೇಟರ್ ಜೋಯೆಲ್ ಶಮನ್ ಡಿ’ ಸೋಜಾ ಮತ್ತು ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಹಾಗೂ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲ್ಯಾಂಟ್ಸ್ ಆ್ಯಂಡ್ ಎನಿಮಲ್ಸ್ ಅಧ್ಯಕ್ಷ ಧ್ರುವ ಎಂ. ಪಾಟೀಲ ನಡೆಸಿಕೊಡಲಿದ್ದಾರೆ. ವನ್ಯಜೀವಿಗಳ ಭಾವಚಿತ್ರ ಪ್ರಯಾಣ ಹಾಗೂ ವಾಣಿಜ್ಯ ಛಾಯಾಗ್ರಹಣದಲ್ಲಿ ನೈಕಾನ್ ಮಿರರ್‌ಲೆಸ್ ಕ್ಯಾಮೆರಾಗಳ ಬಳಕೆಯ ಕುರಿತು ತಮ್ಮ ವೃತ್ತಿಪರ ಅನುಭವಗಳು, ಸೃಜನಾತ್ಮಕ ತಂತ್ರಗಳು ಹಾಗೂ ಉಪಯುಕ್ತ ಮಾಹಿತಿಯನ್ನು ಅವರು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು ಕ್ಯಾಮೆರಾ ನಿರ್ವಹಣೆ, ಅತ್ಯಾಧುನಿಕ ಆಟೋಫೋಕಸ್ ತಂತ್ರಜ್ಞಾನ, ವಿಡಿಯೋ ಸಾಮರ್ಥ್ಯಗಳು, ಲೆನ್ಸ್ ಆಯ್ಕೆ, ಹಾಗೂ ಡಿಜಿಟಲ್ ಕಂಟೆಂಟ್ ಕ್ರಿಯೇಷನ್ ಕಾರ್ಯವಿಧಾನಗಳ ಕುರಿತು ಪ್ರಾಯೋಗಿಕ ಜ್ಞಾನವನ್ನು ಪಡೆಯಬಹುದಾಗಿದೆ.
ಈ ಕಾರ್ಯಾಗಾರವು ಉದ್ಯಮದ ಪರಿಣಿತರೊಂದಿಗೆ ನೇರ ಸಂವಾದ ನಡೆಸಲು, ನಿಕಾನ್‌ನ ಇತ್ತೀಚಿನ ಮಿರರ್‌ಲೆಸ್ ಕ್ಯಾಮೆರಾಗಳನ್ನು ಅನುಭವಿಸಲು ಹಾಗೂ ಡಿಜಿಟಲ್ ಛಾಯಾಗ್ರಹಣ ಮತ್ತು ದೃಶ್ಯ ಕಥನ (Visual Storytelling) ಕ್ಷೇತ್ರದಲ್ಲಿನ ಹೊಸ ಪ್ರವೃತ್ತಿಗಳನ್ನು ತಿಳಿದುಕೊಳ್ಳಲು ಅಪರೂಪದ ಅವಕಾಶವನ್ನು ಒದಗಿಸುತ್ತದೆ.
ಆಸಕ್ತ ವಿದ್ಯಾರ್ಥಿಗಳು, ಛಾಯಾಗ್ರಹಣ ಪ್ರೇಮಿಗಳು ಹಾಗೂ ಸೃಜನಶೀಲ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಭಾಗವಹಿಸಬಹುದಾಗಿದೆ. ಪ್ರವೇಶ ಉಚಿತವಿದ್ದು ಅಸಕ್ತರು ಡಾ. ಮುರುಗೇಶ ಪಟ್ಟಣಶೆಟ್ಟಿ, ಮೊ: 9739317408 ಇವರನ್ನು ಸಂಪರ್ಕಿಸಿ ತಮ್ಮ ಹೆಸರುಗಳನ್ನು ನೋಂದಾಯಿಸಬಹುದಾಗಿದೆ.


