ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಯಲಗೋಡ, ವಂದಾಲ ಗ್ರಾಮಗಳಿಗೆ ಭೇಟಿ ನೀಡಿದ ತಹಶೀಲ್ದಾರ ನಿಂಗಣ್ಣ ಬಿರಾದಾರ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ೨೦೨೬ ಕಾರ್ಯದ ಪ್ರಗತಿ ಪರಿಶೀಲಿಸಿದರು.
ತಾಲ್ಲೂಕಿನ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ತಹಶೀಲ್ದಾರ, ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಆಯ್‌ಆರ್-೨೦೨೬) ಪ್ರಕ್ರಿಯೆ ಆರಂಭವಾಗಿದೆ. ಮತದಾರರಿಗೆ ಗಣತಿ ನಮೂನೆ ವಿತರಿಸಲು ಮತಗಟ್ಟೆ ಅಧಿಕಾರಿಗಳ(ಬಿಎಲ್‌ಓ) ಮನೆ,ಮನೆ ಭೇಟಿ ಪ್ರಾರಂಭವಾಗಿದೆ.
ದಿ:೧೬ ಜೂನ್ ೨೦೨೬ರಂತೆ ಮತದಾರರ ಪಟ್ಟಿಯಲ್ಲಿ ೨,೩೦,೭೮೦ ಮತದಾರರಿದ್ದಾರೆ. ಗಣತಿ ನಮೂನೆಗಳನ್ನು ಮುದ್ರಿಸಿ ಮತಗಟ್ಟೆ ಅಧಿಕಾರಿಗಳಿಗೆ ತಲುಪಿಸಲಾಗಿರುತ್ತದೆ. ಕ್ಷೇತ್ರದಲ್ಲಿ ಶೇ ೯೫.೪೫ ಮ್ಯಾಪ್ ಮಾಡಲಾದ ಒಟ್ಟು ಮತದಾರರಿದ್ದು, ೨,೩೦,೬೧೬ ಒಟ್ಟು ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈವರೆಗೆ ೫೭,೩೩೮ ಗಣತಿ ನಮೂನೆಗಳು ಗಣಕೀಕರಣಗೊಂಡಿವೆ. ೮೩ ಮತದಾರರು ಆನ್‌ಲೈನ್‌ನಲ್ಲಿ ಗಣತಿ ನಮೂನೆಗಳನ್ನು ಸಲ್ಲಿಸಿದ್ದು, ೧೭ ಗೈರು ಹಾಜರಾದ ಮತದಾರರು, ೪೨೫ ಜನ ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು, ೮೦೬ ಮರಣ ಹೊಂದಿರುವ ಮತದಾರರ ಮಾಹಿತಿ ಇದೆ. ಇನ್ನೂ ೭೫ ಮತದಾರರು ಈಗಾಗಲೇ ನೊಂದಾಯಿಸಿಕೊAಡಿದ್ದಾರೆ. ಇದೇ ದಿ:೨೯ ರವರೆಗೆ ಮನೆ, ಮನೆ ಗಣತಿ ಹಾಗೂ ಡಿಜಿಟಲೀಕರಣ ಅವಧಿ ಎಂದರು.
ಗ್ರಾಮ ಆಡಳಿತಾಧಿಕಾರಿ ಸಂಗಮೇಶ ಗ್ವಾಳೇದ, ಬಿಎಲ್‌ಓಗಳಾದ ರಾಘವೇಂದ್ರ, ಸುರೇಶ ಬಡಿಗೇರ, ದಸ್ತಗೀರಸಾಬ್ ಬಗಲಿ ಇದ್ದರು.

