ಖೊಟ್ಟಿ ದಾಖಲೆಗಳ ಆಧಾರದಲ್ಲಿ ಮಾನ್ಯತೆ ಪಡೆದಿದ್ದ ಆರೋಪ | ಧಾರವಾಡದ ಆಯುಕ್ತರ ಕಚೇರಿಯ ನಿರ್ದೇಶಕರ ಆದೇಶ | ವಿದ್ಯಾರ್ಥಿಗಳಿಗೆ ಹತ್ತಿರದ ಸರ್ಕಾರಿ ಶಾಲೆಗೆ ದಾಖಲಿಸಲು ಸೂಚನೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಇಲ್ಲಿನ ವಿದ್ಯಾನಗರದಲ್ಲಿನ ವಿದ್ಯಾಸ್ಪೂರ್ತಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್ ನ ಮಾನ್ಯತೆಯನ್ನು ರದ್ದುಪಡಿಸಿ ಧಾರವಾಡದ ಆಯುಕ್ತರ ಕಚೇರಿಯ ನಿರ್ದೇಶಕರು ಆದೇಶಿಸಿದ್ದಾರೆ.
ಶಾಲೆಗೆ ಅನುಮತಿ ಪಡೆಯುವ ವೇಳೆ ಖೊಟ್ಟಿ ದಾಖಲೆಗಳನ್ನು ಇಲಾಖೆಗೆ ನೀಡಿ ಅನುಮತಿ ಪಡೆದ ಹಿನ್ನೆಲೆ ತನಿಖೆ ನಡೆಸಿ ಈ ಶಾಲೆಯ ಮಾನ್ಯತೆಯನ್ನು ರದ್ದುಪಡಿಸಿದ ಅಧಿಕಾರಿಗಳು ಈಗಾಗಲೇ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹತ್ತಿರದ ಸರ್ಕಾರಿ ಶಾಲೆಗೆ ದಾಖಲಿಸುವಂತೆ ಮತ್ತು ಶಾಲೆಯ ಎಲ್ಲ ದಾಖಲೆಗಳನ್ನು ಹಸ್ತಾಂತರಿಸುವಂತೆ ಸೂಚಿಸಿದ್ದಾರೆ.
ಏನಿದು ಅಕ್ರಮ?
ಶಾಲೆಯು ಮಾನ್ಯತೆ ಪಡೆಯಲು ಸಲ್ಲಿಸಿದ್ದ ದಾಖಲೆಗಳಲ್ಲಿ ಹಲವು ಗಂಭೀರ ವೈರುಧ್ಯಗಳು ತನಿಖೆಯಿಂದ ಪತ್ತೆಯಾಗಿವೆ. ಶಾಲೆ ಕಾರ್ಯನಿರ್ವಹಿಸುತ್ತಿರುವ ಭೂಮಿ, ಕಟ್ಟಡ, ಮೂಲಸೌಕರ್ಯ ಹಾಗೂ ಇಲಾಖೆಗೆ ಸಲ್ಲಿಸಲಾದ ದಾಖಲೆಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಮಾನ್ಯತೆ ಪಡೆಯಲು ಕಡ್ಡಾಯವಾಗಿರುವ ಷರತ್ತುಗಳನ್ನು ಉಲ್ಲಂಘಿಸಿರುವುದು ಹಾಗೂ ಇಲಾಖೆಗೆ ತಪ್ಪು ಮಾಹಿತಿಯನ್ನು ನೀಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಕಾರ, ಕರ್ನಾಟಕ ಶಿಕ್ಷಣ ಅಧಿನಿಯಮದ ಅನ್ವಯ ಮಾನ್ಯತೆಯನ್ನು ರದ್ದುಪಡಿಸಿದೆ.
ಇದಲ್ಲದೆ, ಶಾಲೆಯು ಸಲ್ಲಿಸಿದ್ದ ಕೆಲವು ದಾಖಲೆಗಳು ಮತ್ತು ಸ್ಥಳ ಪರಿಶೀಲನೆಯಲ್ಲಿ ಕಂಡುಬಂದ ವಾಸ್ತವ ಸ್ಥಿತಿಯ ನಡುವೆ ಸ್ಪಷ್ಟ ವ್ಯತ್ಯಾಸ ಕಂಡುಬಂದಿರುವುದನ್ನೂ ಅಧಿಕಾರಿಗಳು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಶಾಲೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಹೋರಾಟದಿಂದ ಬಹಿರಂಗವಾದ ಅಕ್ರಮ
ಮತಕ್ಷೇತ್ರದಲ್ಲಿ ಹೊಸ ಶಾಲೆಗೆ ನೀಡುವ ಅನುಮತಿ ಮತ್ತು ಮನ್ಯತೆ ನವೀಕರಣದಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂಬ ಖಚಿತ ಮಾಹಿತಿ ಮೇರೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಚಂದ್ರಕಾಂತ ಕಾದ್ರೊಳ್ಳಿ ಬಣದ ಜಿಲ್ಲಾಧ್ಯಕ್ಷ ಬಾಲಚಂದ್ರ ಹುಲ್ಲೂರ ನೇತೃತ್ವದಲ್ಲಿ ಇಲ್ಲಿನ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ದೂರು ಪತ್ರವನ್ನು ನೀಡಿದ್ದರು. ಅಧಿಕಾರಿ ಯಾವುದೇ ಕ್ರಮಕ್ಕೆ ಮುಂದಾಗದಿದ್ದಾಗ ಹೋರಾಟಗಾರರು ಅನಿವಾರ್ಯವಾಗಿ ಧರಣಿ ಸತ್ಯಾಗ್ರಹ ಆರಂಭಿಸಿದ್ದರು. ದಿನೇ ದಿನೇ ಹೋರಾಟ ಉಗ್ರವಾಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ಶಾಲೆಯ ದಾಖಲೆಗಳ ಪರಿಶೀಲನೆಗೆ ಮುಂದಾದಾಗ ಈ ಆಕ್ರಮ ಬೆಳಕಿಗೆ ಬಂದಿದ್ದು, ಇಲಾಖಾ ವಿಚಾರಣೆಯಾಗಿ ಅಂತಿಮ ಆದೇಶ ಹೊರಬಿದ್ದಿದೆ.
ಈ ಆದೇಶ ಮಕ್ಕಳಿಗೆ ಮಾರಕವಾಗುವದೇ?
ರದ್ದತಿ ಆದೇಶದಿಂದ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಯಾವುದೇ ತೊಂದರೆ ಆಗುವದಿಲ್ಲ. ಇಲಾಖೆಯೇ ಸ್ಪಷ್ಟಪಡಿಸಿದಂತೆ ಸಧ್ಯ ಇರುವ ಶಾಲಾ ಮಕ್ಕಳನ್ನು ಹತ್ತಿರದ ಸರ್ಕಾರಿ ಶಾಲೆಗೆ ದಾಖಲಿಸಬಹುದು. ಈ ಪ್ರಕ್ರೀಯೆ ಈ ಆದೇಶ ಬಂದ ದಿನದಿಂದಲೇ ಜಾರಿಯಲ್ಲಿರುತ್ತದೆ. ಪಾಲಕರು ನಿರ್ಲಕ್ಷ ವಹಿಸಿದಲ್ಲಿ ಮಾತ್ರ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಹೊರತು ಈ ಆದೇಶದಿಂದ ಯಾವುದೇ ತೊಂದರೆ ಆಗುವದಿಲ್ಲ.
ಶಿಕ್ಷಣ ಇಲಾಖೆಯ ಸ್ಪಷ್ಟ ಸಂದೇಶ
ಶಿಕ್ಷಣ ಕ್ಷೇತ್ರದಲ್ಲಿ ಖೊಟ್ಟಿ ದಾಖಲೆಗಳು, ತಪ್ಪು ಮಾಹಿತಿ ಮತ್ತು ನಿಯಮ ಉಲ್ಲಂಘನೆಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಕ್ರಮದ ಮೂಲಕ ಸರ್ಕಾರ ರವಾನಿಸಿದೆ. ಶಿಕ್ಷಣ ಸಂಸ್ಥೆಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಬೇಕು ಮತ್ತು ಇಲಾಖೆಯನ್ನು ತಪ್ಪುದಾರಿಗೆಳೆಯುವ ಪ್ರಯತ್ನ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬುದನ್ನು ಈ ಆದೇಶ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
