ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಎಚ್.ಜಿ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ತಿಂಗಳು 21 ಮತ್ತು 22 ರಂದು ನಡೆಯಲಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮಕ್ಕಳ ಸಾಹಿತಿ ಹ.ಮಾ ಪೂಜಾರ ಆಯ್ಕೆಯಾಗಿರುವುದಕ್ಕೆ ಹೆಡ್ ಕಾನ್ಸ್‌ಟೇಬಲ್, ಬರಹಗಾರ ಮೌಲಾಲಿ ಆಲಗೂರ ಹರ್ಷವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಲೋಕಕ್ಕೆ ಮಕ್ಕಳ ಸಾಹಿತ್ಯದ ಕೊಡುಗೆ ಅಪಾರ. ಇಂತಹ ಶ್ರೇಷ್ಠ ಮಕ್ಕಳ ಸಾಹಿತ್ಯದ ಉನ್ನತಿಗಾಗಿ ಶ್ರಮಿಸಿದವರು ಹ.ಮಾ ಪೂಜಾರ. ತಮ್ಮ ನಲವತ್ತು ವರ್ಷಗಳ ಸುದೀರ್ಘ ಮತ್ತು ಸಾರ್ಥಕ ಶಿಕ್ಷಕ ವೃತ್ತಿಯ ಜೊತೆಗೆ ಮಕ್ಕಳ ಕಥೆ, ಕಾದಂಬರಿ, ಕವನ ಸೇರಿದಂತೆ ಮಕ್ಕಳ ಸಾಹಿತ್ಯ ಕುರಿತು ಅನೇಕ ಕೃತಿಗಳನ್ನು ಹೊರ ತಂದಿರುವ ಹಿರಿಯ ಜೀವ ಹ.ಮಾ ಪೂಜಾರ.
ಸಾವಿರಾರು ವಿಧ್ಯಾರ್ಥಿಗಳಿಗೆ ಅಕ್ಷರ ಧಾರೆ ಎರೆದ ದೈವ ಸ್ವರೂಪಿ. ನಾಡಿನಲ್ಲಿ ಮಕ್ಕಳ ಸಾಹಿತ್ಯ ವಿಜೃಂಭಿಸಲು ಇವರ ಪರಿಶ್ರಮ ಬಹಳಷ್ಟಿದೆ. ಶಿಕ್ಷಣ ಮತ್ತು ಸಾಹಿತ್ಯದ ಮೂಲಕ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ವಿಕಾಸವನ್ನು ಗಟ್ಟಿಗೊಳಿಸಿದ ಕೀರ್ತಿ ಹ.ಮಾ ಪೂಜಾರರದ್ದು. ಶಿಕ್ಷಕರಾಗಿ, ಮಕ್ಕಳ ಸಾಹಿತಿಯಾಗಿ, ಕನ್ನಡ ಸಾಹಿತ್ಯಕ್ಕೆ ಇವರ ಸೇವೆ ಅನನ್ಯ ಮತ್ತು ಅಮೋಘ. ಮಕ್ಕಳಿಗಾಗಿಯೇ ದುಡಿಯುತ್ತಿರುವ ಹಿರಿಯ ಚೇತನ ಹ.ಮಾ ಪೂಜಾರ. ಇವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ ಶಾಸಕ ಆಶೋಕ ಮನಗೂಳಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಂಪೀರ ವಾಲಿಕಾರ ಹಾಗೂ ಕಸಾಪ ತಾಲೂಕು ಅಧ್ಯಕ್ಷ ವೈ.ಸಿ ಮಯೂರ ಇವರ ಕಾರ್ಯ ಶ್ಲಾಘನೀಯ ಎಂದಿದ್ದಾರೆ.

