ಡಾ. ಬಾಬು ಜಗಜೀವನ ರಾಮ ಅವರ ೪೦ನೇ ಪುಣ್ಯದಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದ ಕೃಷಿ, ರಕ್ಷಣೆ ಹಾಗೂ ಸಾಮಾಜಿಕ ಸಮಾನತೆಯ ಕ್ಷೇತ್ರಗಳಲ್ಲಿ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ ಅವರ ಕೊಡುಗೆ ಅನನ್ಯವಾಗಿದ್ದು, ಅವರ ಸೇವೆ ಸದಾ ಸ್ಮರಣೀಯ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ಡಾ. ಬಾಬು ಜಗಜೀವನ ರಾಮ ಅವರ ೪೦ನೇ ಪುಣ್ಯದಿನ ಅಂಗವಾಗಿ ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ದೇಶದಲ್ಲಿ ಆಹಾರದ ಕೊರತೆ ಇದ್ದ ಸಂದರ್ಭದಲ್ಲಿ ಅವರು ಕೈಗೊಂಡ ಕ್ರಮಗಳು ಹಸಿರು ಕ್ರಾಂತಿಗೆ ಬುನಾದಿ ಹಾಕಿ, ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಿವೆ ಎಂದು ಹೇಳಿದರು.
ರಕ್ಷಣಾ ಸಚಿವರಾಗಿ ಅವರು ಸಮರ್ಥ ನಾಯಕತ್ವ ನೀಡಿದ್ದರು. ಅಲ್ಲದೆ, ದೇಶದ ಮೊದಲ ಕಾರ್ಮಿಕ ಸಚಿವರಾಗಿ ಕಾರ್ಮಿಕರ ಕಲ್ಯಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ವಿವಿಧ ಗಣ್ಯರು ಡಾ.ಬಾಬು ಜಗಜೀವನ ರಾಮ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

