ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಿಲ್ಲದೆ ಬಡ ಗರ್ಭಿಣಿಯರು ತೊಂದರೆ ಪಡುತ್ತಿದ್ದರು. ಆರೋಗ್ಯ ಇಲಾಖೆ ಚುರುಕುಗೊಂಡು ಡೆಪುಟೇಷನ್ (ನಿಯೋಜನೆ) ಮೇಲೆ ನಿಯೋಜನೆಗೊಂಡಿರುವ ಸ್ತ್ರೀರೋಗ ತಜ್ಞರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇನ್ನು ಮುಂದೆ ಸಾರ್ವಜನಿಕರಿಗೆ ವಾರದ ಮೂರು ಪ್ರಮುಖ ದಿನಗಳಲ್ಲಿ ತಜ್ಞರ ಸೇವೆ ಸಿಗಲಿದೆ.
ಮಂಗಳವಾರ, ಗುರುವಾರ, ಶನಿವಾರ ಈ ಮೂರು ದಿನಗಳಂದು ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು ಬೆಳಿಗ್ಗೆಯಿಂದಲೇ ಆಸ್ಪತ್ರೆಯಲ್ಲಿ ಲಭ್ಯವಿರಲಿದ್ದು, ಗರ್ಭಿಣಿಯರ ನಿಯಮಿತ ತಪಾಸಣೆ, ತುರ್ತು ಹೆರಿಗೆ ಹಾಗೂ ಸಿಜೇರಿಯನ್ (ಶಸ್ತ್ರಚಿಕಿತ್ಸೆ) ಸೇವೆಗಳನ್ನು ಉಚಿತವಾಗಿ ನೀಡಲಿದ್ದಾರೆ.
ಇಂಡಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಬಡ ಜನರಿಗೆ ಹೆರಿಗೆ ಸೌಲಭ್ಯವಿಲ್ಲದೆ, ಅನಿವಾರ್ಯವಾಗಿ ವಿಜಯಪುರ ಹಾಗೂ ಸೋಲಾಪೂರದ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡುವ ಪರಿಸ್ಥಿತಿ ಇತ್ತು. ಇಲಾಖೆಯ ಈ ಹೊಸ ವೇಳಾಪಟ್ಟಿ ಪ್ರಕಟಣೆಯಿಂದಾಗಿ, ಗರ್ಭಿಣಿಯರು ತಮಗೆ ಅನುಕೂಲವಾಗುವ ದಿನದಂದೇ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಇಲಾಖೆಯ ಆದೇಶ ಹೊರಡಿಸಿರುವುದಕ್ಕೆ ಇಂಡಿ ತಾಲೂಕಿನ ಜನಸಾಮಾನ್ಯರು ಹಾಗೂ ಗರ್ಭಿಣಿಯರ ಕುಟುಂಬಸ್ಥರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.
ರಕ್ತ ತಪಾಸಣೆಗೆ ಅವಶ್ಯವಿರುವ ಬಯೋಕೆಮೆಸ್ಟಿ ಲ್ಯಾಬ್ ಮಶೀನ್ ರಿಪೇರಿಯಾಗಿದ್ದು ಎಲ್ಲ ತರಹದ ರಕ್ತ ತಪಾಸಣೆ ಪ್ರಾರಂಭ ಮಾಡಲಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿನ ಶೌಚಾಲಯಗಳನ್ನು ಸಹ ಸ್ವಛ್ಚತೆ ಮಾಡಿಸಲಾಗಿದ್ದು ಆಸ್ಪತ್ರೆಯನ್ನು ಸ್ವಚ್ಛಂದವಾಗಿ ಇಡಲಾಗಿದೆ.
“ಆಸ್ಪತ್ರೆಯಲ್ಲಿ ಮುಖ್ಯವಾಗಿ ಅವಶ್ಯವಿದ್ದ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರನ್ನು ನಿಯೋಜನೆ ಮೇಲೆ ಮೂರು ದಿನಗಳ ಕಾಲ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲು ಆದೇಶ ನೀಡಲಾಗಿದೆ. ಉಳಿದಂತೆ ಆಸ್ಪತ್ರೆಯ ಎಲ್ಲ ವಿಭಾಗಗಳಲ್ಲಿಯೂ ಸಿಬ್ಬಂದಿಗಳು ಕಟ್ಟು ನಿಟ್ಟಾಗಿ ತಮ್ಮ ಕಾರ್ಯ ಮಾಡಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ಸಿಜೇರಿಯನ್ ಸೇವೆ ಪುನಃ ಪ್ರಾರಂಬಿಸಲಾಗಿದೆ.”
– ಡಾ. ಆರ್.ಎಸ್. ಇಂಗಳೆ
ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ

