ಚಡಚಣ ಸೂರ್ಯ ಲಾಡ್ಜ್ ಸಮೀಪ ಭೀಕರ ಅಪಘಾತ | ಓರ್ವ ಮಹಿಳೆಗೆ ಗಂಭೀರ ಗಾಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಸೂರ್ಯ ಲಾಡ್ಜ್ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಸೂರ್ಯ ಲಾಡ್ಜ್ ಸಮೀಪ ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಿಂದ ಈ ದುರ್ಘಟನೆ ನಡೆದಿದೆ. ದ್ವಿಚಕ್ರ ವಾಹನವು ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಧುಮುಕನಾಳ ಗ್ರಾಮದ ನಿವಾಸಿಯಾದ 55 ವರ್ಷದ ದಿಲೀಪ್ ಪಾಟೀಲ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪತ್ನಿ 50 ವರ್ಷದ ಲಲಿತಾಬಾಯಿ ಪಾಟೀಲ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಸೋಮೇಶ ಗೆಜ್ಜಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ.
ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಪಘಾತದಲ್ಲಿ ಭಾಗಿಯಾಗಿದ್ದ ಟಿಪ್ಪರ್ ವಾಹನದ ನೋಂದಣಿ ಸಂಖ್ಯೆ MH-09-CA-0822 ಎಂದು ತಿಳಿದುಬಂದಿದೆ.
ಪ್ರಸ್ತುತ ಪೊಲೀಸರು ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಜಾರಿಯಲ್ಲಿದೆ.

