ಲೇಖನ
– ಮ.ನಾ.ಉಡುಪ
ಮಂಡ್ಯ
ಉದಯರಶ್ಮಿ ದಿನಪತ್ರಿಕೆ
ಬಿಡದಿ. ಬೆಂಗಳೂರು-ಮೈಸೂರು ಹೆದ್ದಾರಿಯ ಆ ಬದಿ, ರಾಮನಗರದ ಹೊಸ್ತಿಲಲ್ಲಿ ಹಸಿರಾಗಿ ಉಸಿರಾಡುತ್ತಿರುವ ಭೂಮಿ.
ಈಗ ಅದೇ ಭೂಮಿಗೆ ಮತ್ತೆ ನೋಟಿಸ್ ಬಂದಿದೆ. ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ – GBIT. AI-ಪವರ್ಡ್ ಸ್ಮಾರ್ಟ್ ಸಿಟಿ ಎಂದು ಹೇಳುತ್ತಾರೆ.

ಬೈರಮಂಗಲ, ಕಂಚುಗಾರನಹಳ್ಳಿ ಸೇರಿ 26 ಹಳ್ಳಿಗಳ ರೈತರು 474 ದಿನಗಳಿಂದ ಧರಣಿಯಲ್ಲಿದ್ದಾರೆ. ಜೂನ್ 10, 2026 ರಂದು ಸರ್ಕಾರ 518.45 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆ.
ರೈತರು ಹೇಳುತ್ತಾರೆ: “ಸಾಯುತ್ತೇವೆ, ಭೂಮಿ ಕೊಡುವುದಿಲ್ಲ”.
ಸರ್ಕಾರ ಹೇಳುತ್ತದೆ: “80% ರೈತರು ಒಪ್ಪಿದ್ದಾರೆ”.
ರೈತರು ಮತ್ತೆ ಹೇಳುತ್ತಾರೆ: “ಇಲ್ಲ, ನಮ್ಮನ್ನು ತಪ್ಪಾಗಿ ತೋರಿಸಲಾಗುತ್ತಿದೆ, ನಾವು ವಿರೋಧಿಸುತ್ತಿದ್ದೇವೆ”.
ಯಾರ ಮಾತು ನಿಜ? ಹಳ್ಳಿಗೆ ಹೋಗಿ ನೋಡಿ. ಆ ತೋಟದಲ್ಲಿ ಇನ್ನೂ ರೇಷ್ಮೆ ಹುಳು ಸಾಕುತ್ತಿದ್ದಾರೆ. ವರ್ಷಕ್ಕೆ 35 ಕೋಟಿ ರೇಷ್ಮೆ ಆದಾಯ, 25 ಕೋಟಿ ಹಾಲಿನ ಆದಾಯ ಈ ಹಳ್ಳಿಗಳಿಂದಲೇ ಬರುತ್ತದೆ ಅಂತ ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಇದು ಬಂಜರು ಭೂಮಿಯಲ್ಲ, ಬೆಂಗಳೂರಿಗೆ ತರಕಾರಿ, ಹಾಲು ಕೊಡುವ ಕೈಗಳು.
ಇದು ಮೊದಲ ಸಲವಲ್ಲ

ವರಾಹಿ ಯೋಜನೆಯ ಸಂತ್ರಸ್ತನಾದ ನನ್ನ ಉತ್ತರ ಸಿಗದ ಪ್ರಶ್ನೆ
“ಇದುವರೆಗೂ ಇಂತಹ ಯೋಜನೆಗಳ ಫಲಶೃತಿ ಏನು? ಇದಕ್ಕೆ ಕೊನೆಯೆಂದು?”
ಶರಾವತಿ ಜಲವಿದ್ಯುತ್ ಯೋಜನೆಗೆ ಲಿಂಗನಮಕ್ಕಿ ಮುಳುಗಿತು. ವಾರಾಹಿಗೆ ಮಾಣಿ ಅಣೆಕಟ್ಟು ಕಾಳಿ ನದಿಗೆ ಕದ್ರಾ, ಕೊಡಸಳ್ಳಿ ಕಟ್ಟಿದಾಗ ಎಷ್ಟು ಊರುಗಳು ಹೋದವು. ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಭೂಮಿ ಕೊಟ್ಟವರಿಗೆ ಇಂದಿಗೂ ಪರಿಹಾರ ಸರಿಯಾಗಿ ಸಿಗಲಿಲ್ಲ.
ಪ್ರತಿ ಬಾರಿ ಅದೇ ಕಥೆ
- ಅಭಿವೃದ್ಧಿ ಎಂದು ಭೂಮಿ ತೆಗೆದುಕೊಳ್ಳುವುದು
- ಎಕರೆಗೆ ಲಕ್ಷ ಕೊಟ್ಟು, ಕೋಟಿ ಮಾಡಿಕೊಂಡು ಮಾರುವುದು
- ರೈತ ಬೆಂಗಳೂರಿನ ಸಿಗ್ನಲ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗುವುದು
ಬಿಡದಿ ಇಂಡಸ್ಟ್ರಿಯಲ್ ಟೌನ್‌ಶಿಪ್, ಹಾರೋಹಳ್ಳಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಮಾಡಿದಾಗಲೂ ಇದೇ ಮಾತು ಕೇಳಿದ್ದೆವು – “ರೈತರು ಮಾಯವಾದರೇ?” ಎಂದು. ಹೌದು, ಮಾಯವಾಗಲಿಲ್ಲ. ಬದುಕು ಮಾಯವಾಯಿತು. ಭೂಮಿ ಹೋದವನು ಟೌನ್‌ಶಿಪ್‌ನಲ್ಲಿ ಫ್ಲಾಟ್ ಕೊಳ್ಳಲು ಆಗುತ್ತದೆಯೇ?
ಕುಮಾರಸ್ವಾಮಿಯವರು ಇದನ್ನು ‘ಅಧಿಕೃತ ರಿಯಲ್ ಎಸ್ಟೇಟ್ ಬಿಸಿನೆಸ್’ ಎಂದಿದ್ದಾರೆ. ಯಾರು ಮಾಡಿದರೂ, ಯಾವ ಪಕ್ಷ ಮಾಡಿದರೂ, ಬಿಲ್ ಕಟ್ಟುವುದು ರೈತನೇ.
ಬೆಂಗಳೂರು ಈಗಾಗಲೇ ಭೀಕರವಾಗಿದೆ. ನೀರಿಲ್ಲ, ಟ್ರಾಫಿಕ್‌ನಲ್ಲಿ ಉಸಿರುಗಟ್ಟುತ್ತಿದೆ. ಇನ್ನೊಂದು ಟೌನ್‌ಶಿಪ್ ಕಟ್ಟಿ, ಇನ್ನೊಂದು ಹತ್ತು ಲಕ್ಷ ಜನರನ್ನು ತಂದು ಸುರಿದರೆ, ಬೆಂಗಳೂರು ಉಳಿಯುತ್ತದೆಯೇ, ರೈತ ಉಳಿಯುತ್ತಾನೆಯೇ?
ಬಿಡದಿ ಮಾಯೆ ಬಿಡುವುದೇ?
ಮಾಯೆ ಎಂದರೆ ಭ್ರಮೆ
ನಿಜವಾದ ಅಭಿವೃದ್ಧಿ ಎಂದರೆ ರೈತನನ್ನು ಒಕ್ಕಲೆಬ್ಬಿಸುವುದಲ್ಲ, ರೈತನ ಜೊತೆ ಬೆಳೆಯುವುದು.
ಭೂಮಿ ಕೊಟ್ಟ ರೈತನಿಗೆ ಆ ಟೌನ್‌ಶಿಪ್‌ನಲ್ಲಿ ಒಂದು ಅಂಗಡಿ, ಒಂದು ಕೆಲಸ, ಒಂದು ಘನತೆ ಸಿಗುವ ಯೋಜನೆ ಇದೆಯೇ? ಇಲ್ಲ. ಸಿಗುವುದು ಚೆಕ್ ಮಾತ್ರ. ಆ ಚೆಕ್ ಎರಡು ವರ್ಷದಲ್ಲಿ ಖಾಲಿ.
ಒಕ್ಕಲೆಬ್ಬಿಸುವುದಕ್ಕೆ ಕೊನೆ ಯಾವಾಗ?
ನಮ್ಮ ಹೊಟ್ಟೆಗೆ ಅನ್ನ ಬೆಳೆಯುವ ಕೊನೆಯ ಎಕರೆ ಹೋಗುವವರೆಗೂ?
ಬೆಂಗಳೂರಿಗೆ ಕುಡಿಯಲು ಕೊನೆಯ ಹನಿ ನೀರು ಇರುವ ಕೆರೆ ಮುಚ್ಚುವವರೆಗೂ?
ಬಿಡದಿ ಬಿಡಬೇಕು. ರೈತನನ್ನು ಬಿಡಬೇಕು. ಈ ಮಾಯೆಯನ್ನು ನಾವು ಬಿಡಬೇಕು.
ಇಲ್ಲದಿದ್ದರೆ, ಬಿಡುವೆನೆಂದರೂ ಬಿಡದ ಈ ಮಾಯೆ, ಒಂದು ದಿನ ನಮ್ಮನ್ನೆಲ್ಲಾ ನುಂಗಿ ಬಿಡುತ್ತದೆ.


