ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಜಿಲ್ಲೆಯಲ್ಲಿಯೇ ಆಲಮೇಲ ಪಟ್ಟಣ ದಲ್ಲಿ ಸಾಂಸ್ಕೃತಿಕ ಜಾನಪದ ಕಲೆ ಜಾತ್ರೆ ಹಬ್ಬ ಹರಿದಿನಗಳನ್ನು ವಿಶಿಷ್ಟವಾಗಿ ಆಚರಿಸಲಾ ಗುತ್ತಿದ್ದು, ಕಾರಹುಣ್ಣಿಮೆಯನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರಹುಣ್ಣಿಮೆಯಂದು ಪಟ್ಟಣದ ಪ್ರಮುಖ ಮನೆತನಗಳಾದ ದೇಶಮುಖ ಮತ್ತು ದೇಶಪಾಂಡೆ ಮನೆಗಳಿಂದ ಎತ್ತುಗಳ ಬಂಡಿ ಓಡಸಿ ಕರಿ ಹರಿಯಲಾಯಿತು. ಈ ಪದ್ಧತಿ ಹಿಂದಿನಿಂದಲು ನಡೆಸಿಕೊಂಡು ಬಂದಿರುವುದು ವಿಶೇಷವಾಗಿದೆ.
ಮೀಸಲು ಕರಿ: ಕಾರಹುಣ್ಣಿಮೆಯಂದು ಬೆಳ್ಳಗೆ ಹಳ್ಳಕ್ಕೆ ತೆರಳಿ ಎತ್ತು ಮತ್ತು ಬಂಡಿಯನ್ನು ತೊಳೆದು ಕೊಂಡು ಬೇವಿನ ತಪ್ಪಲಗಳಿಂದ ಶೃಂಗರಿಸಲಾಯಿತು. ನಂತರ ದೇಶಮುಖರ ಸಮ್ಮುಖದಲ್ಲಿ ಸಂಜೆ ಎತ್ತಿನ ಬಂಡಿಯ ಓಟ ಕರಿಹರೆಯುವ ಸಂಪ್ರದಾಯ ನಡೆಯಿತು. ಇಲ್ಲಿ ದೇಶಪಾಂಡೆ ಮತ್ತು ದೇಶಮುಖರ ಮನೆತನದ ಲಕ್ಷ್ಮೀ ಬಂಡೆಗಳ ಕರಿ ಹರಿಯುತ್ತವೆ. ಇದಕ್ಕೂ ಪೂರ್ವದಲ್ಲಿ ಕರಿ ಹರಿಯುವ ಓಟದಲ್ಲಿ ಪಾಲ್ಗೊಳ್ಳುವ ಚಿಟ್ಟ ಬಂಡಿ ಮತ್ತು ಎತ್ತುಗಳನ್ನು ಬಣ್ಣ ತೋರಣಗಳಿಂದ ಅಲಂಕಾರಿಸಲಾಗಿತ್ತು. ಎರಡು ಬಂಡಿಗಳನ್ನು ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ದೇವರಾದ ಶ್ರೀಗಾಲಿಸಾಬ ದರ್ಗಾದ ಎದುರು ತರಲಾಯಿತು. ಬಳಿಕ ಎರಡೂ ಬಂಡಿಗಳು ದರ್ಗಾದ ಮುಂದೆ ಐದು ಸುತ್ತು ಓಡಿಸಿದ ನಂತರ ಮನೆಗೆ ತೆರಳುವಾಗ ದೇಶಮುಖರ ಲಕ್ಷ್ಮೀ ಬಂಡಿ ದಕ್ಷಿಣ ದಿಕ್ಕಿನಲ್ಲಿರುವ ದೇವರ ಅಗಸಿಗೆ ಬೇವಿನ ತೋರಣ ಹಿಡಿದು ಕರಿ ಹರಿಯಲಾಯಲಾಯಿತು.
ಸಾಂಪ್ರದಾಯದಂತೆ ದೇಶಮುಖರ ಬಂಡೆಗೆ ಶ್ರೀಮಂತ ಲಾವಟೆ ಅವರು ಎತ್ತುಗಳನ್ನು ಕಟ್ಟಿದರು. ಬಂಡಿ ಮೇಲೆ ಬಸವರಾಜ ಹೊಸಮನಿ, ದೇಶಪಾಂಡೆ ಬಂಡೆಗೆ ಮಹಿಬೂಬ ಸೌದಾಗರ ಅವರು ಎತ್ತುಗಳು ಕಟ್ಟಿದರು. ಬಂಡಿ ಮೇಲೆ ಈರಣ್ಣ ಗುರಕಾರ ನಿಂತಿದ್ದರು. ದೇಶಮುಖರ ಬಂಡೆಗೆ ಗ್ರಾಮದ ವಾಲಿಕಾರರು ಕೈಯಲ್ಲಿ ತಲವಾರು ಹಾಗೂ ಬಡಿಗಿಗಳನ್ನು ಹಿಡಿದು ಬಂಡೆಗೆ ಕಾವಲು ರಕ್ಷಣೆ ನೀಡಿದರು. ಸಂಜೆ ಎರಡು ಬಂಡೆಗಳು ಬರುವಕಿಂತ ಪೂರ್ವದಲ್ಲಿ 20 ಕ್ಕೂ ಹೆಚ್ಚು ಚಿಕ್ಕ ಬಂಡೆಗಳನ್ನು ಓಡಿಸಲಾಯಿತು.
ಈ ಬಂಡಿ ಸ್ಪರ್ಧೆ ಮತ್ತು ಕರಿಹರಿಯುವ ಸಂಭ್ರಮವನ್ನು ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಸೇರಿ ವೀಕ್ಷಿಸಿದರು.

