ಇಟಗಿಯಲ್ಲಿ ಪಿಕೆಪಿಎಸ್ ಸುವರ್ಣ ಮಹೋತ್ಸವ | ನೂತನ ಕಟ್ಟಡ ಲೋಕಾರ್ಪಣೆ
ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಸಮೀಪದ ಇಟಗಿ ಗ್ರಾಮದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (ಪಿಕೆಪಿಎಸ್) ಸುವರ್ಣ ಮಹೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವಾನಂದ ಪಾಟೀಲ ಮಾತನಾಡಿ, “ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿರಲು ಮಹಿಳೆಯರ ಶ್ರಮವೇ ಕಾರಣ. ದೇಶದಲ್ಲಿ ದಿನಕ್ಕೆ ೧.೦೫ ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ವಾರಕ್ಕೆ ಐದು ದಿನ ಹಾಲು ವಿತರಿಸಲಾಗುತ್ತಿದೆ” ಎಂದರು.
“ಒಂದು ಕಾಲದಲ್ಲಿ ಆಹಾರ ಧಾನ್ಯಗಳಿಗೆ ವಿದೇಶ ಅವಲಂಬಿಸಿದ್ದ ಭಾರತ ಇಂದು ರೈತರ ಪರಿಶ್ರಮದಿಂದ ಸ್ವಾವಲಂಬಿಯಾಗಿದೆ. ಇಟಗಿ ಪಿಕೆಪಿಎಸ್ ವತಿಯಿಂದ ಶೀತಲೀಕರಣ ಕೇಂದ್ರ ಹಾಗೂ ಉಗ್ರಾಣ ನಿರ್ಮಾಣಕ್ಕೆ ಎಲ್ಲ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು. ಸಂಘದ ಕಟ್ಟಡಕ್ಕೆ ೧೫ ಗುಂಟೆ ನೀರಾವರಿ ಜಮೀನನ್ನು ಉಚಿತವಾಗಿ ದಾನ ಮಾಡಿದ ಹಾಲಪ್ಪ ಕಂಬಾರ ಅವರನ್ನು ಅವರು ಅಭಿನಂದಿಸಿದರು.
“ಇಟಗಿ ಸಂಪೂರ್ಣ ನೀರಾವರಿ ಗ್ರಾಮ. ರೈತರು ಕೇವಲ ಕಬ್ಬು, ಈರುಳ್ಳಿಗೆ ಸೀಮಿತವಾಗದೆ ಬೆಳ್ಳುಳ್ಳಿ, ದಾಳಿಂಬೆ ಸೇರಿ ವೈವಿಧ್ಯಮಯ ಬೆಳೆಗಳತ್ತ ಗಮನಹರಿಸಬೇಕು” ಎಂದು ಶಾಸಕರು ಸಲಹೆ ನೀಡಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಮಾತನಾಡಿ, “ನಾಟಕ, ಕಲೆ, ಕ್ರೀಡೆಗೆ ಹೆಸರಾದ ಇಟಗಿಗೆ ಕೆಪಿಎಸ್ ಶಾಲೆ ಮಂಜೂರು ಮಾಡಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.
ಇಟಗಿಯ ಗುರುಶಾಂತವೀರ ಸ್ವಾಮೀಜಿ, ಚಿಮ್ಮಲಗಿಯ ಸಿದ್ದರೇಣುಕ ಸ್ವಾಮೀಜಿ ಹಾಗೂ ಸರೂರು ಮೃತ್ಯುಂಜಯ ಗುರುಗಳು ಸಾನ್ನಿಧ್ಯ ವಹಿಸಿದ್ದರು. ಡಾ. ವಿಶ್ವನಾಥ ಮಠ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ದೇವರ ಹಿಪ್ಪರಗಿ ಶಾಸಕ ರಾಜುಗೌಡ ಬಿ. ಪಾಟೀಲ, ಮಾಜಿ ಶಾಸಕ ಸೋಮನಗೌಡ ಪಾಟೀಲ, ಐ.ಸಿ. ಪಟ್ಟಣಶೆಟ್ಟಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಪಿಕೆಪಿಎಸ್ ಅಧ್ಯಕ್ಷ ಮುದ್ದಪ್ಪ ಗಾಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹಾಗೂ ಜಾನಪದ ಸಾಹಿತಿ ಸಿದ್ದಪ್ಪ ಬಿದರಿ ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಮಾಜಿ ಜಿ.ಪಂ ಸದಸ್ಯೆ ಗೌರಮ್ಮ ಮುತ್ತತ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ, ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ ಮಾಗಿ, ಉಪನಿಬಂಧಕಿ ಎಸ್.ಕೆ. ಭಾಗ್ಯಶ್ರೀ, ಮಹೇಶ ಗಾಳಪ್ಪಗೋಳ, ಆನಂದಗೌಡ ಬಿರಾದಾರ, ವಿ.ಕೆ. ಮಸೂತಿ, ಮುತ್ತಣ್ಣ ಹುಗ್ಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

