ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಡಪ್ರಭು ಕೆಂಪೇಗೌಡರು ಕೇವಲ ಒಬ್ಬ ಆಡಳಿತಗಾರರಲ್ಲ, ದೂರದೃಷ್ಟಿಯ ಚಿಂತಕರು, ಜನಪರ ನಾಯಕರು ಹಾಗೂ ಸುಸಂಘಟಿತ ಬೆಂಗಳೂರು ಮಹಾನಗರ ನಿರ್ಮಾಣದ ಹರಿಕಾರರು ಎಂದು ವಿಜಯಪುರ ತಹಶೀಲ್ದಾರರಾದ ಪ್ರಶಾಂತ ಚನ್ನಗೊಂಡ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಅವರ ಆಡಳಿತದಲ್ಲಿ ಜನಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಬೆಂಗಳೂರು ನಗರ ನಿರ್ಮಾಣ ಮತ್ತು ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಆಡಳಿತ ತತ್ವಗಳು ಹಾಗೂ ಅಭಿವೃದ್ಧಿ ದೃಷ್ಟಿಕೋನ ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಕೆಂಪೇಗೌಡರು ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ಮೂಲಕ ಉತ್ತಮ ಆಡಳಿತ ನಡೆಸಿದ್ದರು. ಅವರ ಆದರ್ಶಗಳು, ಮೌಲ್ಯಗಳು ಮತ್ತು ಸೇವಾ ಮನೋಭಾವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ವಿಶೇಷವಾಗಿ ಯುವಜನತೆ ಅವರ ವ್ಯಕ್ತಿತ್ವ, ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದ ಚಿಂತನೆಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ಯುವಜನ ಸೇವೆ ಮತ್ತು ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ದೈವಾಡಿ, ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ, ಆಡಳಿತ ವೈಖರಿ, ಐತಿಹಾಸಿಕ ಸಾಧನೆಗಳು ಹಾಗೂ ಬೆಂಗಳೂರು ನಗರದ ನಿರ್ಮಾಣದಲ್ಲಿ ಅವರ ದೂರದೃಷ್ಟಿಯ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಕರಾದ ಕೆ.ಎ.ಉಪ್ಪಾರ, ಕೆ.ಎಮ್.ಎಫ್ ಅಧಿಕಾರಿ ಅರವಿಂದ ಎಸ್. ಕನ್ನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ವಿದ್ಯಾವತಿ ಅಂಕಲಗಿ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ, ಬಸವರಾಜ ಶಿವಶರಣ, ಸಂಕೇತಗೌಡ ಕೌವಲಗಿ, ರವಿಗೌಡ, ಶರಣಗೌಡ, ಸಿದ್ದುಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದರು.

