ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಈ ವಿಶ್ವವಿದ್ಯಾಲಯ, ಪುಣೆಯ ಭಾರತಿ ವಿದ್ಯಾಪೀಠ ವಿಶ್ವವಿದ್ಯಾಲಯದ ಪೂನಾ ಫಾರ್ಮಸಿ ಕಾಲೇಜು ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಫಾರ್ಮಸಿ ಕಾಲೇಜಿನ ಸಂಶೋಧಕ ಡಾ. ರವೀಂದ್ರ ಜಿ. ಕುಲಕರ್ಣಿ, ಡಾ. ರಾಘವೇಂದ್ರ ವಿ. ಕುಲಕರ್ಣಿ, ಡಾ. ಆತ್ಮಾರಾಮ ಪವಾರ ಹಾಗೂ ಡಾ. ಅರವಿಂದಗೌಡ ಪಾಟೀಲ ಅವರ ತಂಡ ನಡೆಸಿದ “ಸಿಂಥೆಸಿಸ್ ಅಂಡ್ ಸೈಟೋಟಾಕ್ಸಿಕ್ ಆಕ್ಟಿವಿಟಿ ಆಪ್ ಇಂಡೋಲ್ ಡೇರಿವೆಟಿವ್ಸ್ ಬಿಯರಿಂಗ್ ಟ್ರಯಾಜೋಲ್ ಸ್ಕ್ಯಾಪೋಲ್ಡ್” ಎಂಬ ಸಂಶೋಧನೆಗೆ ಕೇಂದ್ರ ಸರಕಾರದ ಪೇಟೆಂಟ್ ದೊರೆತಿದೆ.
ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಔಷಧವನ್ನು(Drug Molecule) ಕಂಡುಹಿಡಿಯುವ ಉದ್ದೇಶದಿಂದ ಕೈಗೊಳ್ಳಲಾದ ಜಂಟಿ ಸಂಶೋಧನೆಗೆ ಈ ಪೇಟೆಂಟ್ ಲಭಿಸಿದೆ.
ಈ ಸಂಶೋಧನೆಯು ಔಷಧೀಯ ಕ್ಷೇತ್ರದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಚಿಕಿತ್ಸೆ ವಿಧಾನಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನವಾಗಿದ್ದು, ಆರೋಗ್ಯ ಕ್ಷೇತ್ರದ ಪ್ರಮುಖ ಸವಾಲುಗಳನ್ನು ಎದುರಿಸಲು ಎರಡೂ ವಿಶ್ವವಿದ್ಯಾಲಯಗಳು ಹೊಸ ಔಷಧಗಳ ಅನ್ವೇಷಣೆಗೆ ಮಹತ್ವದ ಕೊಡುಗೆ ನೀಡಲಿವೆ.
ವಿಜ್ಞಾನಿಗಳ ಈ ಸಂಶೋಧನೆ ಪೇಟೆಂಟ್ ಲಭಿಸಿರುವುದಕ್ಕೆ ಬಿ.ಎಲ್.ಡಿ.ಈ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ, ಡೀಮ್ಡ್ ವಿವಿ ಕುಲಾಧಿಪತಿ ಬಿ. ಎಂ. ಪಾಟೀಲ, ಸಮಕುಲಾಧಿಪತಿ ಪ್ರೊ. ವೈ. ಎಂ. ಜಯರಾಜ, ಕುಲಪತಿ ಡಾ. ಅರುಣ ಚಂ. ಇನಾಮದಾರ ಸಂತಸ ವ್ಯಕ್ತಪಡಿಸಿದ್ದು, ಸಂಶೋಧಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

