ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನಡಹಳ್ಳಿ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆಯ ನೇತೃತ್ವದಲ್ಲಿ ಇದೇ ದಿ. ೩೦ ರಂದು ತಾಳಿಕೋಟೆ ತಾಲೂಕಿನ ಮೂಕೀಹಾಳ ಗ್ರಾಂ ಪಂಚಾಯ್ತಿ ಎದುರು ಸಾವಿರಾರು ರೈತರೊಂದಿಗೆ ಪಂಚಾಯ್ತಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ(ನಡಹಳ್ಳಿ) ಅವರು ಹೇಳಿದರು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ೨೦೧೯ರಿಂದ ಇಲ್ಲಿಯವರೆಗೆ ಮೂಕೀಹಾಳ ಗ್ರಾಪಂ ವ್ಯಾಪ್ತಿಯ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾಯೋಜನೆಯ ಇನ್ಸೂರೇನ್ಸ್ ತುಂಬುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಕೂಡಾ ರೈತರ ಬೆಳೆಗಳು ಹಾಳಾಗಿ ಹೋಗಿದ್ದರೂ ಇನ್ಸೂರೇನ್ಸ್ ಕಂಪನಿಯಿಂದ ಹಣ ರೈತರಿಗೆ ಜಮೆಯಾಗಿಲ್ಲಾ ಇದಕ್ಕೆ ಮುಖ್ಯ ಕಾರಣವೇನೆಂಬುದು ಬೇಕಾಗಿದೆ. ಬೆಳೆ ಹಾನಿ ವರದಿ ಸಲ್ಲಿಸಬೇಕಾದ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು, ಕೃಷಿ ಇಲಾಖಾ ಅಧಿಕಾರಿಗಳು ಗ್ರಾಮಾಡಳಿತ ಅಧಿಕಾರಿಗಳು ಇನ್ಸೂರೇನ್ಸ್ ಕಂಪನಿಯ ಏಜಂಟರಂತೆ ಆಗಿದ್ದರ ಪರಿಣಾಮ ರೈತರು ಸಾವಿನ ದವಡೆಗೆ ಸಿಲುಕುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಮತ್ತು ಮೂಕೀಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಇದ್ದರೂ ಕೂಡಾ ಯಾವ ಹಳ್ಳಿಗೂ ನೀರು ಮುಟ್ಟುತ್ತಿಲ್ಲಾ ಪ್ರತಿ ತಿಂಗಳು ನಿರ್ವಹಣೆ ಗುತ್ತಿಗೆ ಹಿಡಿದವರು ೫ ಲಕ್ಷಕ್ಕೂ ಅಧಿಕ ಹಣವನ್ನು ಪಡೆದುಕೊಳ್ಳುತ್ತಾ ಸಾಗಿರುವದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಮೂಕೀಹಾಳ ಗ್ರಾಮದಲ್ಲಿ ಪ್ಲೋರಾಯಡ್ ಯುಕ್ತ ನೀರು ಇರುವದರಿಂದ ಜನರು ಅನೇಕ ರೋಗ ರುಜಿನಗಳಿಗೆ ಒಳಗಾಗುತ್ತಿದ್ದಾರೆ. ಇದರ ವ್ಯಾಪ್ತಿಯ ಹರನಾಳ, ಕಲ್ಲದೇವನಹಳ್ಳಿ, ಹಡಗಿನಾಳ ಗ್ರಾಮದ ಜನರು ತಾಳಿಕೋಟೆಗೆ ಹೋಗಿ ನೀರು ತೆಗೆದುಕೊಂಡು ಬಂದು ಕುಡಿಯುತ್ತಾ ಸಾಗಿದ್ದಾರೆ. ಈ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ೧೧ ಶುದ್ದ ಕುಡಿಯುವ ನೀರಿನ ಘಟಕಗಳಿದ್ದರೂ ಒಂದೂ ಚಾಲೂ ಸ್ಥಿತಿಯಲ್ಲಿಲ್ಲ. ಕೋಟ್ಯಾಂತ ರೂಪಾಯಿ ಹಣ ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆಂದು ಆರೋಪಿಸಿದರು.
ಮೂಕೀಹಾಳ ಗ್ರಾಪಂ ವ್ಯಾಪ್ತಿಯಲ್ಲಿ ರೈತಪರ ಚಿಂತನೆಗಳೊಂದಿಗೆ ಇದೇ ದಿ.೩೦ ರಂದು ಮೂಕೀಹಾಳ ಗ್ರಾಪಂ ಎದುರು ಹೋರಾಟವನ್ನು ನಮ್ಮ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ಅಂದಿನ ದಿನ ನಡೆಯುವ ಹೋರಾಟಕ್ಕೆ ಅಧಿಕಾರಿಗಳು ಆಗಮಿಸಿ ಸ್ಪಂದಿಸದಿದ್ದರೆ ರಾಜ್ಯ ಹೆದ್ದಾರಿ ತಡೆದು ಹೋರಾಟ ಮಾಡುತ್ತೇವೆ. ಅಂದು ಸುಮಾರು ೨ ಸಾವಿರಕ್ಕೂ ಅಧಿಕ ರೈತರು ಭಾಗಿಯಾಗಲಿದ್ದಾರೆಂದು ತಿಳಿಸಿದರು.
ಕರ್ನಾಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕಲ್ಲು ಸೋನ್ನದ, ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಅವರು ೩೦ ರಂದು ನಡೆಯಲಿರುವ ಹೋರಾಟದ ರೂಪರೇಶೆಗಳ ಕುರಿತು ಮಾತನಾಡಿದರು.
ಈ ಸಮಯದಲ್ಲಿ ಸಂಘಟನೆಯ ತಾಲೂಕಾ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಯುವ ಅಧ್ಯಕ್ಷ ದೇವರಾಜ ಗುಂಡಕನಾಳ, ಉಮೇಶ ಮಕಾಳಿ, ಹಣಮಂತ ಗೋನಾಳ, ಯಲ್ಲು ಹಡಗಿನಾಳ, ಹಣಮಂತ್ರಾಯ ಮಕಾಳೆ, ಬಸವರಾಜ ಮಕಾಳೆ, ಮಹ್ಮದಹನಿಫ್ ಮುಲ್ಲಾ, ಮೈಬು ಅವಟಿ, ದೇವಣ್ಣ ಮೇಟಿ, ಸತೀಶ ಬಡಿಗೇರ, ಪರಸು ಕೊಡಕೇಲ್ಲ ಮೊದಲಾದವರು ಉಪಸ್ಥಿತರಿದ್ದರು.

