ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮತಕ್ಷೇತ್ರದ ಬೊಮ್ಮನಹಳ್ಳಿ ಗ್ರಾಮದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮತ್ತೊಂದೆಡೆಗೆ ತೆರಳಬಾರದು ಎಂಬ ದಿಸೆಯಲ್ಲಿ ಗ್ರಾಮಸ್ಥರೆಲ್ಲರು ಸೇರಿಕೊಂಡು ಪ್ರೌಢಶಾಲಾ ನಿರ್ಮಾಣಕ್ಕೆ ಹೊಸ ಜಮೀನು ಖರೀದಿ ಮಾಡಲು ಮುಂದಾಗಿದ್ದು, ಅದರ ಖರೀದಿಗಾಗಿ ಸಿಂದಗಿಯ ಎಂ.ಸಿ.ಮನಗೂಳಿ ಪ್ರತಿಷ್ಠಾನದಿಂದ ರೂ.೫ಲಕ್ಷ, ಹಾಗೂ ಸಚಿವ ಡಾ.ಎಂ.ಬಿ.ಪಾಟೀಲ ಅವರು ನೀಡಿದ ರೂ.೫ಲಕ್ಷ ಚೆಕ್‌ನ್ನು ಗ್ರಾಮಸ್ಥರಿಗೆ ಶಾಸಕ ಅಶೋಕ ಮನಗೂಳಿ ಹಸ್ತಾಂತರಿಸಿದರು.
ಸಿಂದಗಿ ನಗರದ ಶಾಸಕರ ಕಾರ್ಯಾಲಯದಲ್ಲಿ ಬಮ್ಮನಳ್ಳಿ ಗ್ರಾಮದ ಶಾಲೆಯ ಭೂಮಿ ಖರೀದಿಗೆ ರೂ.೧೦ಲಕ್ಷಗಳ ಚೆಕ್ಕನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಬೊಮ್ಮನಹಳ್ಳಿ ಗ್ರಾಮಸ್ಥರ ಬೇಡಿಕೆಯ ಅನುಗುಣವಾಗಿ ಈ ಹಿಂದೆ ನೂತನ ಗ್ರಾಪಂ ಕಟ್ಟಡದ ಲೋಕಾರ್ಪಣೆ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲರು ಹಾಗೂ ನಾನು ತಲಾ ೫ಲಕ್ಷದಂತೆ ಶಾಲಾ ನಿರ್ಮಾಣಕ್ಕಾಗಿ ಜಮೀನು ಖರೀದಿಗಾಗಿ ನೀಡುವುದಾಗಿ ಭರವಸೆ ನೀಡಿದ್ದೇವು. ಅದರಂತೆ ರೂ.೧೦ಲಕ್ಷ ಚೆಕ್ಕನ್ನು ಹಸ್ತಾಂತರ ಮಾಡಲಾಗಿದೆ. ಈ ಪಬ್ಲಿಕ್ ಶಾಲೆ ಮಂಜೂರು ಮಾಡುವ ಮೂಲಕ ರೂ.೪ಕೋಟಿ ಮಂಜೂರು ಮಾಡಿಸಲಾಗಿದೆ ಎಂದರು.
ಈ ವೇಳೆ ಗ್ರಾಮದ ಪ್ರಮುಖರಾದ ಬಿ.ಎಚ್.ಬಿರಾದಾರ ಮಾತನಾಡಿ, ಕಳೆದ ೧೮ವರ್ಷಗಳಿಂದ ಶಾಲೆಗಾಗಿ ಜಮೀನು ಖರೀದಿಸಬೇಕೆಂಬುದು ಗ್ರಾಮಸ್ಥರ ಆಶಯವಾಗಿತ್ತು. ಗ್ರಾಮಸ್ಥರು ಪ್ರೌಢಶಾಲಾ ನಿರ್ಮಾಣಕ್ಕಾಗಿ ಜಮೀನು ಖರೀದಿಗೆ ಮುಂದಾಗಿದ್ದು, ಅದಕ್ಕೆ ಶಾಸಕ ಅಶೋಕ ಮನಗೂಳಿ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಪಬ್ಲಿಕ್ ಶಾಲೆ ಮಂಜೂರು ಮಾಡಿಸಿ ರೂ.೪ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ. ಅಲ್ಲದೆ ಜಮೀನು ಖರೀದಿಗೆ ರೂ.೧೦ಲಕ್ಷ ಹಣ ನೀಡಿದ್ದಾರೆ ಎಂದರು.
ಈ ವೇಳೆ ಆಲಮೇಲ ಪಪಂ ಅಧ್ಯಕ್ಷ ಸಾದಿಕ್ ಸುಂಬಡ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಕೋಳಾರಿ, ಜಿಲ್ಲಾ ಕೆಡಿಪಿ ಸದಸ್ಯ ನೂರಹಮ್ಮದ ಅತ್ತಾರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಣಮಂತ ಸುಣಗಾರ, ಪ್ರವೀಣ ಕಂಠಿಗೊಂಡ, ಭೀಮು ಬಮ್ಮನಹಳ್ಳಿ, ಕುಮಾರ ದೇಸಾಯಿ ಸೇರಿದಂತೆ ಗ್ರಾಮಸ್ಥರಿದ್ದರು.

