ಯಾದಗಿರಿಯಲ್ಲಿ ಮಹಿಳೆಯರೇ ನಿರ್ವಹಿಸುತ್ತಿರುವ ನಬಾರ್ಡ್ ನೆರವಿನ ಕಡಲೆಕಾಯಿ ಮೌಲ್ಯವರ್ಧನೆ ಘಟಕ ಉದ್ಘಾಟಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ
ಯಾದಗಿರಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಕರ್ನಾಟಕದ ಯಾದಗಿರಿ ಜಿಲ್ಲೆಯ ಕಳಪೆ ಸಾಮಾಜಿಕ-ಆರ್ಥಿಕ ಸೂಚ್ಯಂಕಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಕಡಿಮೆಯಾಗಿರುವುದು, ಬಹು ಆಯಾಮದ ಬಡತನದ ಪ್ರಮಾಣ ಹೆಚ್ಚಿರುವುದು, ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿರುವುದು ಹಾಗೂ ತಲಾ ಆದಾಯ ಅತಿ ಕಡಿಮೆ ಇರುವುದು ಆತಂಕಕಾರಿ ಸಂಗತಿಗಳಾಗಿವೆ ಎಂದು ಹೇಳಿದರು.
ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿರುವ ಸೀತಾರಾಮನ್, ಯಾದಗಿರಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತದಿಂದ ತುರ್ತು ಮತ್ತು ವಿಶೇಷ ಗಮನದ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಯಾದಗಿರಿಯಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿರುವ ನಬಾರ್ಡ್ ನೆರವಿನ ಕಡಲೆಕಾಯಿ ಮೌಲ್ಯವರ್ಧನೆ ಘಟಕವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ‘ಯಾದಗಿರಿ ಹಾಗೂ ಪಕ್ಕದ ರಾಯಚೂರು ಜಿಲ್ಲೆಗಳನ್ನು “ಆಕಾಂಕ್ಷಿ ಜಿಲ್ಲೆಗಳು” (Aspirational Districts) ಎಂದು ಗುರುತಿಸಲಾಗಿದೆ. ಏಕೆಂದರೆ ಅಭಿವೃದ್ಧಿಯ ಫಲಗಳು ರಾಜ್ಯದ ಇತರ ಭಾಗಗಳಷ್ಟು ವೇಗವಾಗಿ ಈ ಪ್ರದೇಶಗಳಿಗೆ ತಲುಪಿಲ್ಲ. ಈ ಅಂತರವನ್ನು ನಿವಾರಿಸಲು ಎಲ್ಲ ಹಂತದ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.
ಕಡಲೆಕಾಯಿ ಸಂಸ್ಕರಣಾ ಘಟಕ ಸ್ಥಾಪನೆಯ ಉದ್ದೇಶವನ್ನು ವಿವರಿಸಿದ ಅವರು, ಯಾದಗಿರಿಯಲ್ಲಿ ವರ್ಷಕ್ಕೆ ಸುಮಾರು 22,500 ಮೆಟ್ರಿಕ್ ಟನ್ ಕಡಲೆಕಾಯಿ ಉತ್ಪಾದನೆಯಾಗುತ್ತಿದ್ದು, ಮೌಲ್ಯವರ್ಧನೆಗೆ ಉತ್ತಮ ಅವಕಾಶಗಳಿವೆ. ಈಗ ನಾವು ಕಡಲೆಕಾಯಿ ಹುರಿಯುವುದು, ಎಣ್ಣೆ ಉತ್ಪಾದಿಸುವುದು ಹಾಗೂ ಪೀನಟ್ ಬಟರ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಬಲ್ಲ ಘಟಕವನ್ನು ಸ್ಥಾಪಿಸಿದ್ದೇವೆ. ಈ ಘಟಕವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಪೆದ್ದಪಲ್ಲಿ ಮಹಿಳಾ ರೈತರ ಉತ್ಪಾದಕರ ಕಂಪನಿ ಲಿಮಿಟೆಡ್‌ನ್ನು ಅವರು ಶ್ಲಾಘಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಾಪಿಸಲಾದ ಏಳು ಮೌಲ್ಯವರ್ಧನೆ ಘಟಕಗಳಲ್ಲಿ, ಯಾದಗಿರಿ ಘಟಕವನ್ನು ಮಾತ್ರ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಆದರೆ, ಘಟಕವನ್ನು ನಡೆಸುತ್ತಿರುವ ಮಹಿಳೆಯರು ರೈತರಿಂದ ನೇರವಾಗಿ ಕಡಲೆಕಾಯಿ ಖರೀದಿಸಲು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಮಾಹಿತಿ ತಮಗೆ ಲಭ್ಯವಾಗಿದೆ. ಮಾರುಕಟ್ಟೆ ಮತ್ತು ಮಂಡಿಗಳಿಂದ ಖರೀದಿಸಲು ಮಹಿಳೆಯರು ಪ್ರಯತ್ನಿಸುತ್ತಿದ್ದು, ಈ ಉದ್ದೇಶಕ್ಕಾಗಿ ನಬಾರ್ಡ್ ವಿಶೇಷ ಅಧಿಕಾರಿಯನ್ನೂ ನೇಮಿಸಿದೆ. ಆದರೂ ರೈತರಿಂದ ನೇರವಾಗಿ ಖರೀದಿಸುವಲ್ಲಿ ಮಧ್ಯವರ್ತಿಗಳ ಅಡ್ಡಿ ಎದುರಾಗುತ್ತಿದೆ. ಕಚ್ಚಾ ವಸ್ತುಗಳ ಖರೀದಿಯಲ್ಲಿ ಏಕೆ ಸಮಸ್ಯೆ ಎದುರಾಗುತ್ತಿದೆ ಎಂದು ಸ್ಥಳೀಯ ಆಡಳಿತವನ್ನು ಪ್ರಶ್ನಿಸಿದ ಅವರು, ಈ ಬಗ್ಗೆ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಸೂಚಿಸಿದರು.

ಅನಕ್ಷರತೆ, ಬಡತನ, ಅತಿ ಕಡಿಮೆ ತಲಾ ಆದಾಯ
ಅಂತೆಯೇ ಮೂಲಸೌಕರ್ಯಗಳ ಕುರಿತು ಮಾತನಾಡಿದ ಕೇಂದ್ರ ವಿತ್ತ ಸಚಿವೆ ಅವರು, ಜಿಲ್ಲೆಯಲ್ಲಿ ಶಾಲೆಗಳಿದ್ದರೂ ಶಿಕ್ಷಕರಿಲ್ಲ, ಶೌಚಾಲಯಗಳ ಕೊರತೆ ಇದೆ ಮತ್ತು ಸಾಕಷ್ಟು ತರಗತಿ ಕೊಠಡಿಗಳೂ ಇಲ್ಲ. ಜಿಲ್ಲೆಯ ಬಡತನದ ಪರಿಸ್ಥಿತಿಯನ್ನೂ ಅವರು ಉಲ್ಲೇಖಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಬಡತನವನ್ನು ಬಹುಆಯಾಮದ ಮಾನದಂಡಗಳ ಆಧಾರದ ಮೇಲೆ ಜಿಲ್ಲಾವಾರು ಅಳೆಯಲು ಆರಂಭಿಸಲಾಯಿತು. ವಿವಿಧ ಯೋಜನೆಗಳ ಮೂಲಕ ದೇಶದಾದ್ಯಂತ ಸುಮಾರು 25 ಕೋಟಿ ಜನರನ್ನು ಬಹುಆಯಾಮದ ಬಡತನದಿಂದ ಹೊರತರಲಾಗಿದೆ. ಆದರೂ ಈ ಎಲ್ಲ ಪ್ರಯತ್ನಗಳ ನಡುವೆಯೂ ಯಾದಗಿರಿ ಇನ್ನೂ ದೇಶದ ಅತ್ಯಂತ ಬಡ ಜಿಲ್ಲೆಗಳಲ್ಲಿ ಒಂದಾಗಿ ಉಳಿದಿದೆ ಎಂದರು.

