ದೇವರ ಹಿಪ್ಪರಗಿ ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರತಿಯೊಂದು ಮಗುವಿನಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದು ದೇವರ ಹಿಪ್ಪರಗಿ ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಹೇಳಿದರು.
ಸಿಂದಗಿ ನಗರದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಅಖಂಡ ಸಿಂದಗಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜ ವತಿಯಿಂದ ಹಮ್ಮಿಕೊಂಡ ೨೦೨೫-೨ ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು. ತಂದೆ-ತಾಯಿ ಹಾಗೂ ಗುರುಹಿರಿಯರಿಗೆ ಗೌರವ ನೀಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ನಾಗರತ್ನ ಅಶೋಕ ಮನಗೂಳಿ ಸನ್ಮಾನಿಸಿದ ಬಳಿಕ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮತ್ತು ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಮಕ್ಕಳಿಗೆ ಕೇವಲ ಹೆಚ್ಚು ಅಂಕಗಳಿಸುವ ಶಿಕ್ಷಣ ನೀಡಿದರೇ ಸಾಲದು, ಅವರಿಗೆ ಒಳ್ಳೆಯ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುವುದರ ಜೊತೆಗೆ ಅವರಲ್ಲಿರುವ ಕೌಶಲ್ಯ ಗುರುತಿಸಿ, ಪ್ರೋತ್ಸಾಹಿಸಿದಾಗ ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ, ಸಮಾಜದ ೨ಎ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಒಂದು ವೇಳೆ ಎಲ್ಲರ ಪ್ರಯತ್ನದಿಂದ ಸಮಾಜಕ್ಕೆ ೨ಎ ಮೀಸಲಾತಿ ಸಿಕ್ಕರೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ತಾಲೂಕು ಘಟಕವು ಪ್ರತಿ ವರ್ಷವೂ ಇಂಹತ ಸಮಾವೇಶಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಮ್ಮುಖವನ್ನು ಆಸಂಗಿಹಾಳ ಶ್ರೀಮಠದ ಶಂಕರಾನಂದ ಮಹಾರಾಜರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಸವಿತಾ ಝಳಕಿ, ಪುರಸಭೆಯ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹಂಗರಗಿ, ಅಶೋಕ ಕೊಳಾರಿ, ಚಂದ್ರಶೇಖರ ನಾಗರಬೆಟ್ಟ, ಕುಮಾರ ದೇಸಾಯಿ, ಸಂಗನಗೌಡ ಪಾಟೀಲ ಅಗಸಬಾಳ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಶಿವಾನಂದ ಬಡಾನೂರ, ವಿಶ್ವನಾಥ ಕುರಡಿ, ಬಸವರಾಜ ಐರೋಡಗಿ, ಕಾಳಪ್ಪ ಬಗಲಿ, ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ ಸೇರಿದಂತೆ ಇತರರು ಇದ್ದರು. ಪಂಚಮಸಾಲಿ ನೌಕರರ ಸಂಘದ ಅಧ್ಯಕ್ಷ ಮಹಾಂತೇಶ ಯಡ್ರಾಮಿ ಪ್ರಾಸ್ತಾವಿಕ ಮಾತನಾಡಿದರು.

