ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಅರಿವು ಕೇಂದ್ರದ ಗ್ರಾಮ ಪಂಚಾಯತಿ ಮೇಲ್ವಿಚಾರಕರನ್ನು ಭಾರತ್ ಜೋಡೋ ಯುವಸಂಘದ ಮೇಲ್ವಿಚಾರಕರನ್ನಾಗಿ ನೇಮಿಸಿರುವದನ್ನು ಕೈಬಿಡಬೇಕೆಂದು ಆಗ್ರಹಿಸಿ ತಾಲ್ಲೂಕು ಗ್ರಂಥಾಲಯ ಮೇಲ್ವಿಚಾರಕರ ಸಂಘದಿದ ತಾಲ್ಲೂಕು ಪಂಚಾಯತಿ ಎಡಿಪಿಆರ್ ಶಿವಾನಂದ ಮೂಲಿಮನಿ ಹಾಗೂ ಶಾಂತಗೌಡ ನ್ಯಾಮಣ್ಣನವರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಗೌರವಾಧ್ಯಕ್ಷ ಭೀಮಸಿಂಗ ರಾಠೋಡ ಮಾತನಾಡಿ, ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸಾಮಾನ್ಯವಾಗಿ ಒಬ್ಬರೇ ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಯ ಸ್ಪರ್ಧಾರ್ಥಿಗಳಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳ ಮೂಲಕ ನಿರಂತರವಾಗಿ ಸೇವೆಯನ್ನು ಒದಗಿಸಲಾಗುತ್ತಿದೆ. ಒಂದು ವೇಳೆ ಭಾರತ್ ಜೋಡೋ ಯುವ ಸಂಘಗಳಿಗೆ ನೇಮಿಸಿದರೆ ಓದುಗರಿಗೆ ತುಂಬಾ ತೊಂದರೆಯಾಗುತ್ತದೆ. ಜೊತೆಗೆ ಸಾರ್ವಜನಿಕರಿಂದ ಟೀಕೆಗೆ, ಅನಗತ್ಯ ವಾದ ವಿವಾದಗಳಿಗೆ ಆಸ್ಪದ ಮಾಡಿಕೊಟ್ಟಂತಾಗುತ್ತದೆ. ಅನೇಕ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರನ್ನು ಈ ಕಾರ್ಯಕ್ಕೆ ನೇಮಿಸುತ್ತಿದ್ದು, ನಮ್ಮ ತಾಲ್ಲೂಕಿನಲ್ಲಿಯೂ ಕೂಡಾ ಹಾಗೆ ಮಾಡಿ ಗ್ರಂಥಾಲಯ ಮೇಲ್ವಿಚಾರಕರನ್ನು ಈ ಕಾರ್ಯದಿಂದ ಕೈಬಿಡಬೇಕೆಂದು ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ ಉಕುಮನಾಳ, ತಾಲ್ಲೂಕು ಪದಾಧಿಕಾರಿಗಳಾದ ರಮೇಶ ಕುಂಬಾರ, ರಾಮನಗೌಡ ಬಿರಾದಾರ, ಚನ್ನಪ್ಪ ಹಿರೇಕುರುಬರ, ಗಂಗಾಬಾಯಿ ಪಾಟೀಲ, ರೇಖಾ ಪಾಕಿ, ದಿಲಶಾದ ಇನಾಮದಾರ, ಪರಶುರಾಮ ಶಿರಶ್ಯಾಡ ಇದ್ದರು.

