ರೈತಸಂಘದಲ್ಲಿಲ್ಲದ ಬೆಲೆ ಏರಿಕೆ ಒಮ್ಮತ | ಕಾರ್ಖಾನೆಗಳು ಮಂದಸ್ಮಿತ | ಇವರೀರ್ವರ ಮಧ್ಯೆ ರೈತ ಹತ!
ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ
ಆಫ್ಜಲ್ಪುರ್: ಒಂದು ವರ್ಷ ಹಗಲಿರುಳು ಶ್ರಮಿಸಿ ಬೆಳೆಸಿದ ಕಬ್ಬು ಕಟಾವಿಗೆ ಸಿದ್ಧವಾಗಿದೆ. ಆದರೆ ಕಬ್ಬು ಅರೆಯುವಿಕೆ ಯಾವಾಗ ಆರಂಭ, ದರ ಎಷ್ಟು ಎಂಬ ಎರಡು ಪ್ರಶ್ನೆಗಳಿಗೆ ಉತ್ತರ ಸಿಗದೆ ಜಿಲ್ಲೆಯ ಬೆಳೆಗಾರರು ಕಂಗಾಲಾಗಿದ್ದಾರೆ. ಕೈಯಲ್ಲಿ ಸಾಲದ ಹೊರೆ, ಹೊಲದಲ್ಲಿ ಒಣಗುತ್ತಿರುವ ಬೆಳೆ, ಕಣ್ಣಲ್ಲಿ ಮುಂದಿನ ಬದುಕಿನ ಆತಂಕ; ಇದು ಇಂದಿನ ಕಬ್ಬು ಬೆಳೆಗಾರನ ಸ್ಥಿತಿ.
ಬರಗಾಲದ ಬಿಸಿ ಮತ್ತು ಅಂತರ್ಜಲ ಕುಸಿತದ ನಡುವೆಯೂ ರೈತರು ಸಾಲ ಮಾಡಿ ಕೊಳವೆಬಾವಿಯಿಂದ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಈಗ ಕಟಾವು ವಿಳಂಬವಾದರೆ ತೂಕ ಮತ್ತು ಇಳುವರಿ ಎರಡೂ ಕುಸಿಯುತ್ತದೆ. ಕಬ್ಬು ಒಣಗಿದಷ್ಟೂ ರೈತನ ಲಾಭ ಕರಗುತ್ತಿದೆ, ಸಾಲದ ಬಡ್ಡಿ ಮಾತ್ರ ಬೆಳೆಯುತ್ತಿದೆ.
ದರದ ವಿಚಾರದಲ್ಲಿ ರೈತ ಸಂಘಟನೆಗಳಲ್ಲೇ ಒಮ್ಮತವಿಲ್ಲ. ಒಂದು ಸಂಘಟನೆ ಟನ್‌ಗೆ ₹3,500 ಕೇಳಿದರೆ, ಇನ್ನೊಂದು ಉತ್ಪಾದನಾ ವೆಚ್ಚ ಹೆಚ್ಚಿದೆ ಎಂದು ₹4,500ರಿಂದ ₹6,000ರವರೆಗೆ ಆಗ್ರಹಿಸುತ್ತಿದೆ. ಮತ್ತೆ ಕೆಲವರು ಮಹಾರಾಷ್ಟ್ರ ಮಾದರಿಯಲ್ಲಿ ₹3,200 ಮುಂಗಡ ನೀಡಿ, ಉಳಿದ ಹಣವನ್ನು ಅಂತಿಮ ಲೆಕ್ಕಾಚಾರದಂತೆ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಭಿನ್ನ ಧ್ವನಿಗಳೇ ಕಾರ್ಖಾನೆಗಳೊಂದಿಗಿನ ಮಾತುಕತೆಯನ್ನು ದುರ್ಬಲಗೊಳಿಸುತ್ತಿವೆ.
ಇತ್ತ ಕಾರ್ಖಾನೆಗಳ ಆಡಳಿತ ಮಂಡಳಿಗಳು ಮೌನ ವಹಿಸಿವೆ. “ಮೊದಲು ಸಂಘಟನೆಗಳು ಒಂದೇ ದರಕ್ಕೆ ಒಪ್ಪಲಿ, ನಂತರ ನಿರ್ಧಾರ” ಎಂಬ ನಿಲುವು ತಾಳಿ ಖರೀದಿಯನ್ನು ಮುಂದೂಡುವುದು ಸರಿಯಲ್ಲ. ಉತ್ಪಾದನಾ ವೆಚ್ಚ, ಸಕ್ಕರೆ ಇಳುವರಿ, ಉಪ ಉತ್ಪನ್ನಗಳ ಆದಾಯದ ಲೆಕ್ಕ ಮಂಡಿಸುವ ಹಕ್ಕು ಕಾರ್ಖಾನೆಗಳಿಗಿದೆ; ಆದರೆ ರೈತನ ಬೆಳೆ ಖರೀದಿಯನ್ನು ಅನಿರ್ದಿಷ್ಟವಾಗಿ ಮುಂದೂಡುವ ಹಕ್ಕಿಲ್ಲ. ಅರೆಯುವ ದಿನಾಂಕ, ಖರೀದಿ ಪ್ರಮಾಣ, ಸಾಗಾಣಿಕೆ ವೆಚ್ಚ ಮತ್ತು ಪಾವತಿ ಅವಧಿಯ ಬಗ್ಗೆ ಬಹಿರಂಗವಾಗಿ ಮಾಹಿತಿ ನೀಡಬೇಕೆಂಬುದು ರೈತರ ಒತ್ತಾಯ.
ಕೇಂದ್ರ ಸರ್ಕಾರ ನಿಗದಿಪಡಿಸುವ (ಎಫ್ ಆರ್ ಪಿ) ಕಾನೂನುಬದ್ಧ ಕನಿಷ್ಠ ಬೆಲೆಯಾದರೂ, ಹೆಚ್ಚುವರಿ ದರ, ಕಟಾವು-ಸಾಗಾಣಿಕೆ ವೆಚ್ಚ ಹಾಗೂ ಪಾವತಿ ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ಸಕ್ಕರೆ ಕನಿಷ್ಠ ಮಾರಾಟ ಬೆಲೆ (ಎಂ ಎಸ್ ಪಿ) ಮತ್ತು ಕಾರ್ಖಾನೆಗಳ ಆರ್ಥಿಕ ಸ್ಥಿತಿಯ ಜೊತೆಗೆ ರೈತರ ಉತ್ಪಾದನಾ ವೆಚ್ಚ, ನೀರಿನ ಖರ್ಚು, ಕೂಲಿಯನ್ನೂ ಪರಿಗಣಿಸಬೇಕಿದೆ. ಕಾರ್ಖಾನೆಗಳು, ರೈತ ಸಂಘಟನೆಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದು ಕಾಲಮಿತಿಯೊಳಗೆ ತೀರ್ಮಾನ ಕೈಗೊಳ್ಳುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ.
ಈ ಗೊಂದಲದ ನಡುವೆ ಹೆಸರು ಹೇಳಲಿಚ್ಛಿಸದ ಬೆಳೆಗಾರರು ತಮ್ಮ ಅಸಹಾಯಕತೆಯನ್ನು ಹೀಗೆ ಹೊರಹಾಕಿದ್ದಾರೆ: “ಕಳೆದ ವರ್ಷದ ದರವನ್ನಾದರೂ ಕೊಡಿ. ನಮ್ಮ ಕಬ್ಬು ಹೊಲದಲ್ಲೇ ಒಣಗುತ್ತಿದೆ. ಹೆಚ್ಚುವರಿ ದರದ ಬಗ್ಗೆ ಸಂಘಟನೆಗಳು ಕಾರ್ಖಾನೆಗಳೊಂದಿಗೆ ಎಷ್ಟು ದಿನ ಬೇಕಾದರೂ ಮಾತುಕತೆ ನಡೆಸಲಿ. ಆದರೆ ನಮ್ಮ ಕಬ್ಬು ತಕ್ಷಣ ಕಟಾವಾಗಿ ಕಾರ್ಖಾನೆಗೆ ಹೋಗಲಿ. ದರದ ಜಗಳದಲ್ಲಿ ನಮ್ಮ ಬೆಳೆ ಹಾಳಾಗಬಾರದು.” ಬೆಲೆ ಕೇಳುವ ಶಕ್ತಿಯೂ ಇಲ್ಲದೆ, ಕೇವಲ ಬೆಳೆ ಉಳಿದರೆ ಸಾಕು ಎನ್ನುವ ಮಟ್ಟಕ್ಕೆ ರೈತ ಇಳಿದಿದ್ದಾನೆ.
ರೈತನಿಗೆ ದೊಡ್ಡ ಅಂಕಿಗಳ ಘೋಷಣೆಗಿಂತ ಸಕಾಲದ ಕಟಾವು, ತೂಕದಲ್ಲಿ ಪಾರದರ್ಶಕತೆ ಮತ್ತು ನಿಗದಿತ ಅವಧಿಯಲ್ಲಿ ಹಣ ಪಾವತಿ ಅಷ್ಟೇ ಮುಖ್ಯ. ಕಬ್ಬು ಬೆಳೆದವನು ರೈತ, ನೀರು ಹಾಯಿಸಿದವನು ರೈತ, ಸಾಲ ಮಾಡಿದವನು ರೈತ, ಬೆಳೆ ಒಣಗಿದರೆ ನಷ್ಟ ಅನುಭವಿಸುವವನೂ ರೈತನೇ. ಆದರೆ ನಿರ್ಧಾರ ಕೈಗೊಳ್ಳುವವರು ಕಾರ್ಖಾನೆಗಳು, ಬೇಡಿಕೆ ಮಂಡಿಸುವವರು ಸಂಘಟನೆಗಳು, ಮಧ್ಯಸ್ಥಿಕೆ ವಹಿಸಬೇಕಾದವರು ಸರ್ಕಾರ.
ಸಂಘಟನೆಗಳು ಪರಸ್ಪರ ಆರೋಪ ಬಿಟ್ಟು ಕನಿಷ್ಠ ಸಾಮಾನ್ಯ ಬೇಡಿಕೆಯೊಂದನ್ನು ರೂಪಿಸಬೇಕು. ಕಾರ್ಖಾನೆಗಳು ಮೌನ ಮುರಿದು ದರ ಮತ್ತು ಕಟಾವು ವೇಳಾಪಟ್ಟಿ ಪ್ರಕಟಿಸಬೇಕು. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಇಲ್ಲವಾದರೆ ರೈತ ಕೇಳುವ ಪ್ರಶ್ನೆ ಒಂದೇ: “ನಮ್ಮ ಕಬ್ಬಿಗೆ ದರ ನಿಗದಿಪಡಿಸಲು ಎಲ್ಲರೂ ಮುಂದೆ ಬರುತ್ತೀರಿ; ಆದರೆ ಕಬ್ಬು ಒಣಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ಯಾರಿಗೂ ಇಲ್ಲವೇ?”

