ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ರಾಜ್ಯದಲ್ಲಿಯೇ ದಾಖಲೆ ಆಗುವ ರೀತಿಯಲ್ಲಿ ಜನಸ್ತೋಮ ಸೇರಿ ಅನಾವರಣ ಮಾಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭರವಸೆ ನೀಡಿದರು.
ನಗರದ ಅಹಿಲ್ಯಾಬಾಯಿ ಹೋಳ್ಕರ್ ವೃತ್ತದಲ್ಲಿ ರವಿವಾರ ರಾಜಮಾತಾ ಅಹಿಲ್ಯಾಬಾಯಿ ಹೋಳ್ಕರ್ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ ಮಹಾರಾಷ್ಟ್ರಕ್ಕೆ ಸೀಮಿತವಾಗಿದ್ದ ಹಿಂದೂ ಧರ್ಮ ರಕ್ಷಕಿ ಅಹಿಲ್ಯಾಬಾಯಿ ಹೋಳ್ಕರ್ ಅವರ ಇತಿಹಾಸ ರಾಜ್ಯದಲ್ಲಿಯೂ ಪ್ರಚುರಪಡಿಸಲು ಅವರ ವೃತ್ತ ಸೇರಿದಂತೆ ಅನೇಕ ಮಹಾಪುರುಷರ, ಸ್ವಾತಂತ್ರ್ಯ ಹೋರಾಟಗಾರರ, ನಾಡಿಗಾಗಿ ಸೇವೆ ಸಲ್ಲಿಸಿದ ಮಹನೀಯರ ವೃತ್ತಗಳ ಸ್ಥಾಪನೆ, ರಸ್ತೆಗಳಿಗೆ ಹೆಸರು ನಾಮಕರಣ ಮಾಡಲಾಗಿದೆ. ರಾಯಣ್ಣನವರ ಮೂರ್ತಿ ಬಾಕಿಯಿದ್ದು, 2027ರ ಅಗಸ್ಟ್ 15 ರಂದು ಅದನ್ನೂ ಮಾಡುವುದಾಗಿ ತಿಳಿಸಿದರು.
ಭಾರತದ ಇತಿಹಾಸದಲ್ಲಿ ರಾಜಮಾತಾ ಅಹಿಲ್ಯಾಬಾಯಿ ಹೋಳ್ಕರ್ ಅವರು ನಡೆಸಿದ 35 ವರ್ಷಗಳ ಸುಧೀರ್ಘ ಆಡಳಿತ ಕಾಲವನ್ನು ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅಹಿಲ್ಯಾಬಾಯಿ ಅವರು ಸಮರ್ಥ ಆಡಳಿತಗಾರರಾಗಿದ್ದರು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ, ಮಹಿಳಾ ಸೈನ್ಯವನ್ನು ಕಟ್ಟಿದರು. ಕೃಷಿ, ವ್ಯಾಪಾರ ಮತ್ತು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಉತ್ತಮ ಆಡಳಿತ, ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಸಾಮಾಜಿಕ ಕಾರ್ಯಗಳಿಗೆ ಪ್ರಸಿದ್ಧರಾಗಿದ್ದರು. ಅವರ ಜನಪರ ಹಾಗೂ ದೈವಿಕ ಕಾರ್ಯಗಳನ್ನು ಪರಿಗಣಿಸಿ ‘ಲೋಕಮಾತಾ’ ಎಂದು ಗೌರವದಿಂದ ಕರೆಯಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಅನೇಕ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಕುರಿಯವರು ನೇತೃತ್ವ ವಹಿಸಿದ್ದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯರಾದ ಪ್ರೇಮಾನಂದ ಬಿರಾದಾರ, ಜವಾಹರ ಗೋಸಾವಿ, ರಾಹುಲ್ ಜಾಧವ, ಮಾಜಿ ಉಪಮೇಯರ್ ರಾಜೇಶ ದೇವಗಿರಿ, ಮುಖಂಡರಾದ ಅಶೋಕ ಬೆಲ್ಲದ, ರಮೇಶ ಪಡಸಲಗಿ, ರಮೇಶ ವೀರಕರ, ಸೋಮು ರಣದೇವಿ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ, ಶಂಕರ ಬಾಡಗಂಡಿ, ಮಾಂತೇಶ ಒಣರೊಟ್ಟಿ, ಗಿರೀಶ ಕೆಳಗಡೆ ಸೇರಿದಂತೆ ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಅಹಿಲ್ಯಾಬಾಯಿ ಹೋಳ್ಕರ್ ಮಹಿಳೆಯರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

