ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜೀವಜಾಲಕ್ಕೆ ರವಿವಾರ ಪಟ್ಟಣದಲ್ಲಿ ಸುರಿದ ಮಳೆಯು ತಂಪು ನೀಡಿತು. ಸತತವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಪಕ್ಷಿ-ಪ್ರಾಣಿಗಳು ಹಾಗೂ ಜನರಿಗೆ ನಿರಾಳತೆ ಸಿಕ್ಕಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಈ ಮೊದಲ ಮಳೆಯಿಂದ ಜಾನುವಾರುಗಳಿಗೆ ಮೇವು, ನೀರಿನ ಸೌಲಭ್ಯ ದೊರೆಯುವಂತಾಗಿದ್ದು, ರೈತರು ಹಾಗೂ ಪಟ್ಟಣದ ನಾಗರಿಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಆದರೆ, ಬಿರುಗಾಳಿ ಸಹಿತ ಸುರಿದ ಮಳೆಯಿಂದ ಪಟ್ಟಣದಲ್ಲಿ ಕೆಲವೆಡೆ ಅನಾಹುತಗಳು ಸಂಭವಿಸಿವೆ. ಇಂದಿರಾ ಕ್ಯಾಂಟಿನ್ ಮುಂಭಾಗದ ರಸ್ತೆಯ ಮಧ್ಯದಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದರೆ, ಕೆಲವು ಮನೆಗಳ ಮುಂದಿನ ಶೀಟ್‌ಗಳು ಹಾರಿಹೋದ ಘಟನೆಗಳು ನಡೆದಿವೆ.
ವಿದ್ಯುತ್ ಕಂಬಗಳು ಧರೆಗೆ ಉರುಳಿದ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ ಸಂತೋಷ ಮ್ಯಾಗೇರಿ ಹಾಗೂ ಹೆಸ್ಕಾಂ ಅಧಿಕಾರಿ ಎಸ್.ಎಸ್. ಪಡಸಲಗಿ ಮಾಹಿತಿ ನೀಡಿದ್ದಾರೆ.
ಇದಲ್ಲದೆ, ತಾಲೂಕಿನ ರೋಣಿಹಾಳ ಮತ್ತು ಮಲಘಾಣ ಗ್ರಾಮದ ಭಾಗಗಳಲ್ಲಿ ಕೆಲವೆಡೆ ಆಲಿಕಲ್ಲು ಮಳೆಯೂ ದಾಖಲಾಗಿದೆ.

