ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೃಷ್ಣ ಮೇಲ್ದಂಡೆ ಯೋಜನೆ ಭೂ ಸ್ವಾಧೀನಕ್ಕೆ ಒಳಪಡುವ ಸಂತ್ರಸ್ತರಿಗೆ ನೆರವಾಗಲು ಏಪ್ರಿಲ್ ನಿಂದ ಜುಲೈ 2026ರ ವರೆಗೆ ಲೋಕ ಅದಾಲತ್ ನಡೆಲಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು,
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಈ ಲೋಕ ಅದಾಲತ ಆಯೋಜಿಸಿದೆ. ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಮತ್ತು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುವ ರೈತರು ಈ ಲೋಕ ಅದಾಲತನಲ್ಲಿ ಪಾಲ್ಗೊಂಡು ಪರಸ್ಪರ ಒಪ್ಪಿಗೆ ಮೇರೆಗೆ ಪ್ರಕರಣವನ್ನು ತಕ್ಷಣ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಇದರಿಂದ ನ್ಯಾಯಕ್ಕಾಗಿ ಹಲವಾರು ತಿಂಗಳವರೆಗೆ ನ್ಯಾಯಾಲಯಗಳುಗೆ ಅಲೆದಾಡುವುದು, ವಿಚಾರಣೆಗೆ ಕಾಯುವುದು ತಪ್ಪಲಿದೆ. ಒಂದೇ ದಿನದಲ್ಲಿ ಪ್ರಕರಣ ಇತ್ಯರ್ಥವಾಗುವುದರಿಂದ ರೈತರ ಅಮೂಲ್ಯ ಸಮಯ ಉಳಿತಾಯವಾಗಲಿದೆ.
ಲೋಕ ಅದಾಲತನಲ್ಲಿ ಪ್ರಕರಣ ಇತ್ಯರ್ಥ ಪ್ರಕ್ರಿಯೆ ಸರಳವಾಗಿದ್ದು, ತಕ್ಷಣ ಇತ್ಯರ್ಥವಾಗುವುದರಿಂದ ರೈತರು ಸಂಕಷ್ಟದಿಂದ ಮುಕ್ತರಾಗಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ.
ವಿಜಯಪುರ ಒಂದನೇ ಮತ್ತು ಮೂರನೇ ಹೆಚ್ಚುವರಿ ನ್ಯಾಯಾಲಯಗಳಲ್ಲಿ ಏಪ್ರಿಲ್ ನಿಂದ ಮತ್ತು ಮೇ ವರೆಗೆ ಮಧ್ಯಾಹ್ನ 12.30 ರಿಂದ 1.30ರ ವರೆಗೆ ಮತ್ತು ಜೂನ್ ಹಾಗೂ ಜುಲೈ 2026ರ ವರೆಗೆ ಸಂಜೆ 4.45 ರಿಂದ 5.45ರ ವರೆಗೆ ಪ್ರಕರಣಗಳ ಇತ್ಯರ್ಥ ಪ್ರಕ್ರಿಯೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಭೂಸ್ವಾಧೀನ ಅಧಿಕಾರಿಗಳ ಕಚೇರಿಗಳನ್ನು ತಕ್ಷಣ ಸಂಪರ್ಕಿಸುವಂತೆ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

