ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ ೬ನೇ ತರಗತಿ ಪ್ರವೇಶ ಕಲ್ಪಿಸಲು ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹತಾ ಪರೀಕ್ಷೆಗೆ ಇಲಾಖಾ ವೆಬ್ ಸೈಟ್https://swd.karnataka.gov.in ರಲ್ಲಿ ಆನ್-ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಅರ್ಜಿ ಸಲ್ಲಿಸಲು ಮೇ ೪ ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದ್ದು, ತಹಶೀಲ್ದಾರರವರಿಂದ ಪಡೆದ ಆರ್.ಡಿ ಸಂಖ್ಯೆ ಹೊಂದಿರುವ ಚಾಲ್ತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು. ವಿದ್ಯಾರ್ಥಿಗಳು ಕುಟುಂಬದ ವಾರ್ಷಿಕ ಆದಾಯ ೨.೫೦ ಲಕ್ಷದೊಳಗಿರಬೇಕು. ವಿದ್ಯಾರ್ಥಿಯು ೨೦೨೫-೨೬ನೇ ಸಾಲಿನಲ್ಲಿ ೫ನೇ ತರಗತಿಯಲ್ಲಿ ತೇರ್ಗಡೆಯಾಗಿ ಶೇ.೬೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ನೀಡಲಾಗುವುದು. ಆಯ್ಕೆಯಾಗುವ ವಿದ್ಯಾರ್ಥಿಗಳಲ್ಲಿ ಬಾಲಕಿಯರಿಗೆ ಶೇ.೫೦ ರಷ್ಟು ಮೀಸಲಾತಿ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಹಾಗೂ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ವಿಫಲರಾಗಿರುವ ಅತಿ ಹಿಂದುಳಿದ ವರ್ಗದವರಿಗೆ ಮೊದಲನೇ ಆದ್ಯತೆ ನೀಡಲಾಗುವುದು.
ಪೌರ ಕಾರ್ಮಿಕರ, ಸಫಾಯಿ ಕರ್ಮಚಾರಿ ಮಕ್ಕಳು, ಸ್ಮಶಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳು, ವಿಕಲಚೇತನರು ಕೋವಿಡ್-೧೯,ಪ್ರಕೃತಿ ವಿಕೋಪದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು, ಸಿಂಗಲ್ ಫ್ಯಾಮಿಲಿ ಮಕ್ಕಳು, ಯೋಜನಾ ನಿರಾಶ್ರಿತರ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ಕೊಳಗೇರಿಗಳಲ್ಲಿ ವಾಸಿಸುತ್ತಿರುವವರ ಮಕ್ಕಳು, ಕೃಷಿ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇ.೪ ರೊಳಗಾಗಿ ಇಲಾಖಾ ವೆಬ್ ಸೈಟ್ hಣಣಠಿs://sತಿಜ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ನೋಂದಾಯಿಸಿಕೊಂಡು ಅಗತ್ಯ ದಾಖಲೆಗಳನ್ನು ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗೆ ಅಥವಾ ಈ ಕಚೇರಿಗೆ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
