ಹೆಚ್ ಡಿ ಕೋಟೆ ಸ್ಮಾರ‍್ಟ್ ಸಿಟಿ ಮಾಡಲು ಶಾಸಕ ಅನಿಲ್ ಚಿಕ್ಕಮಾದು ಪ್ರಯತ್ನ
ಉದಯರಶ್ಮಿ ದಿನಪತ್ರಿಕೆ
ಹೆಚ್.ಡಿ.ಕೋಟೆ: ವನ-ಜಲ ಸಂಪತ್ತಿನ ಜೊತೆಗೆ ಸಫಾರಿಯಿಂದ ವಿದೇಶಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಹೆಚ್ ಡಿ ಕೋಟೆ ತಾಲೂಕಿನಲ್ಲಿ ಜನರ ಜೀವನ ಶೈಲಿ ಇನ್ನು ಬದಲಾಗಿಲ್ಲ. ಗ್ರಾಮೀಣ ಪ್ರದೇಶಗಳೇ ಸುತ್ತುವರೆದಿರುವ ಹಿನ್ನೆಲೆ ಪಟ್ಟಣ ಕೂಡ ಹಳ್ಳಿ ವಾತಾವರಣದಿಂದ ಹೊರಬಂದಿಲ್ಲ. ಇದನ್ನು ಮನಗಂಡಿರುವ ಶಾಸಕ ಅನಿಲ್ ಚಿಕ್ಕಮಾದು ಪಟ್ಟಣಕ್ಕೆ ಆಧುನಿಕ ಟಚ್ ಕೊಡಲು ಮುಂದಾಗಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ, ಹೈಟೆಕ್ ಪಾರ‍್ಕ್ ನಿರ‍್ಮಾಣಕ್ಕೆ ಮುಂದಾಗಿದ್ದಾರೆ.
ಮಂಗಳವಾರದ ಸಂತೆಗಷ್ಟೇ ಸೀಮಿತವಾಗಿದ್ದ ಪಟ್ಟಣದ ಸಂತೇಮಾಳ ಮೈದಾನ ಸ್ಥಳಾಂತರ ಮಾಡಿ, ಅಲ್ಲಿ ಪಾರ‍್ಕ್ ಮಾಡುವ ಆಸೆಯಿದ್ದು, ಅಂದಾಜು ೧೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ವಿವಿಧೆದೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ೬ವರೆ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೆಚ್ ಡಿ ಕೋಟೆ ಪಟ್ಟಣವನ್ನು ದಾವಣಗೆರೆ, ಹುಬ್ಬಳಿ-ಧಾರವಾಡ, ತುಮಕೂರು ಮಾದರಿಯಲ್ಲಿ ಸ್ಮಾರ‍್ಟ್ ಸಿಟಿ ಮಾಡುವುದಾಗಿ ಆಸೆ ಇದೆ. ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಜೊತೆ ಮಾತನಾಡಿದ್ದೇನೆ. ಆದಷ್ಟು ಬೇಗ ಸ್ಮಾರ‍್ಟ್ ಸಿಟಿ ಯೋಜನಾದಿಕಾರಿಗಳನ್ನು ಕೋಟೆಗೆ ಕರೆಯಿಸಿ ಬ್ಲೂ ಪ್ರಿಂಟ್ ರೆಡಿ ಮಾಡಿಸಲಾಗುವುದು. ಹೆಚ್ಚಿನ ಅನುದಾನ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಪಾರ‍್ಕ್ ಉದ್ಯಾನವನ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಈ ವೇಳೆ ಏಜಾಜ್ ಪಾಷಾ, ಎಚ್.ಸಿ. ನರಸಿಂಹಮೂರ್ತಿ, ತಾ. ಪಂ. ಮಾಜಿ ಸದಸ್ಯ ಎಚ್ ಟಿ ಗಿರಿಗೌಡ, ನಾಗನಹಳ್ಳಿ ಪ್ರದೀಪ್, ಎಂ ಸಿ ದೊಡ್ಡನಾಯಕ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಮಂಜುನಾಥ್, ರಾಜು ವಿಶ್ವಕರ್ಮ ಸೇರಿದಂತೆ ಹಲವರಿದ್ದರು.

