ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ನಿಡಗುಂದಿ ತಾಲ್ಲೂಕಿನಲ್ಲಿ ಭಾರತೀಯ ಜನಗಣತಿ-೨೦೨೭ರ ಮೊದಲ ಹಂತದ ಸಮೀಕ್ಷೆಗೆ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶ ಸೇರಿ ಒಟ್ಟು ೧೮೨ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಹಶೀಲ್ದಾರ್ ಎ.ಡಿ. ಅಮರಾವದಗಿ ತಿಳಿಸಿದರು.
ಆಲಮಟ್ಟಿ ಗ್ರಾಮದಲ್ಲಿ ಗುರುವಾರ ಗ್ರಾಮೀಣ ಭಾಗದ ಗಣತಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಗ್ರಾಮೀಣ ಭಾಗದಲ್ಲಿ ೧೧೬ ಬ್ಲಾಕ್ ಹಾಗೂ ಪಟ್ಟಣ ಭಾಗದಲ್ಲಿ ೨೬ ಬ್ಲಾಕ್‌ಗಳನ್ನು ರಚಿಸಲಾಗಿದೆ. ಪ್ರತಿ ಬ್ಲಾಕ್‌ಗೆ ಒಬ್ಬರಂತೆ ಗಣತಿದಾರರನ್ನು ಹಾಗೂ ಪ್ರತಿ ಆರು ಗಣತಿದಾರರಿಗೆ ಒಬ್ಬ ಸೂಪರ್‌ವೈಸರ್‌ರನ್ನು ನೇಮಿಸಲಾಗಿದೆ” ಎಂದರು.
“ಮೊದಲ ಮೂರು ದಿನ ಆಯಾ ಬ್ಲಾಕ್‌ನ ಮನೆಗಳ ಗುರುತಿಸುವಿಕೆ ಕಾರ್ಯ ನಡೆಯಲಿದೆ. ನಂತರ ಗಣತಿ ಕಾರ್ಯ ಆರಂಭಗೊಂಡು ಮುಂದಿನ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಪ್ರತಿ ಗಣತಿದಾರರಿಗೂ ಐದು ದಿನಗಳ ತರಬೇತಿ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
“ಜನಗಣತಿ ಎರಡು ಹಂತದಲ್ಲಿ ನಡೆಯುತ್ತಿದ್ದು, ಈಗ ನಡೆಯುತ್ತಿರುವುದು ಮೊದಲ ಹಂತದ ಗಣತಿ. ಈ ಹಂತದಲ್ಲಿ ಮನೆಗಳ ಗುರುತಿಸುವಿಕೆ, ಕಟ್ಟಡಗಳಿಗೆ ಸಂಕೇತ ನೀಡುವುದು ಹಾಗೂ ಸ್ವತ್ತು ದಾಖಲಿಸುವ ಕಾರ್ಯ ನಡೆಯಲಿದೆ” ಎಂದು ತಹಶೀಲ್ದಾರ್ ವಿವರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇಒ ವೆಂಕಟೇಶ ವಂದಾಲ, ಶಿರಸ್ತೇದಾರ್ ಜಿ.ಟಿ. ನಾಯಕ, ಶಿಕ್ಷಣ ಸಂಯೋಜಕ ಉದಯಕುಮಾರ ಬಶೆಟ್ಟಿ, ನಾನಾಗೌಡ ಪಾಟೀಲ, ಸಲೀಂ ಯಲಗೋಡ, ಸುರೇಶ ಹುರಕಡ್ಲಿ, ಬಸವರಾಜ ಯರವಿನತೆಲಿಮಠ, ಮಂಜುನಾಥ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

