ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಧರ್ಮಗಳು ಹೃದಯದಲ್ಲಿ ಪ್ರೀತಿ ಹುಟ್ಟಿಸಬೇಕು, ಮನುಷ್ಯರನ್ನು ಒಡೆಯದೇ ಕೂಡಿಸಬೇಕು ಎಂದು ಶಿರೂರಿನ ವಿಜಯಮಹಾಂತ ತೀರ್ಥ ಮಠದ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಆಲಮಟ್ಟಿ ಡ್ಯಾಂಸೈಟ್‌ನಲ್ಲಿ ಗುರುವಾರ ನಡೆದ ನವೀಕರಣಗೊಂಡ ಜಾಮೀಯಾ ಮಸೀದಿಯ ಉದ್ಘಾಟನೆ, ಮಸೀದಿ ದರ್ಶನ ಹಾಗೂ ಸೌಹಾರ್ದತಾ ಸಮಾರಂಭದಲ್ಲಿ ಅವರು ಮಾತನಾಡಿದರು.
“ಮುಸ್ಲಿಂರ ಏಕದೇವೋಪಾಸನೆ ಹಾಗೂ ಶರಣರ ಲಿಂಗ ಪೂಜೆ ಎರಡೂ ಒಂದೇ. ಒಬ್ಬ ಸಚ್ಚರಿತ ಮುಸಲ್ಮಾನನು ನಿಜವಾದ ಶರಣನಾಗಬಲ್ಲ. ಹಾಗೆಯೇ ಒಬ್ಬ ಸಚ್ಚರಿತ ಶರಣನು ಇಸ್ಲಾಂನ ಶಾಂತಿ ಮಂತ್ರವನ್ನು ಪಾಲಿಸುವವನಾಗಬಲ್ಲ” ಎಂದು ಸ್ವಾಮೀಜಿ ಹೇಳಿದರು.
ಬೀಳಗಿಯ ಹಜರತ್ ಮೌಲಾನಾ ಕಾಬತೆ ಅಬ್ದುಲ್ ವಹಾಬ್ ಸಾಬ್ ಮಾತನಾಡಿ, “ಅಲ್ಲಾ ಎಂದರೆ ಕೇವಲ ಆಕಾಶದಲ್ಲಿರುವ ಶಕ್ತಿ ಮಾತ್ರವಲ್ಲ, ಪ್ರೀತಿ, ದಯೆ ಮತ್ತು ನ್ಯಾಯದ ರೂಪದಲ್ಲಿ ಮನುಷ್ಯನ ಅಂತರಂಗದಲ್ಲಿ ನೆಲೆಸಿರುವ ಚೈತನ್ಯ. ಅಜಾನ್ ಮನುಷ್ಯನನ್ನು ಲೌಕಿಕ ಜಗತ್ತಿನಿಂದ ಪಾರಮಾರ್ಥಿಕ ಕಡೆಗೆ ಕರೆಯುವ ದನಿ. ಅಲ್ಲಾಹ್ ಎಂದರೆ ಒಂದೇ ಧರ್ಮಕ್ಕೆ ಸೀಮಿತವಲ್ಲ, ಅವನು ಜಗದೀಶ್ವರ” ಎಂದರು.
ಬಸವನಬಾಗೇವಾಡಿಯ ಮಫ್ತಿ ಅಬ್ದುಲ್ ಅಜೀಜ್ ನಂದವಾಡಗಿ, ನಿಡಗುಂದಿಯ ಮೌಲಾನಾ ಆಸೀಫ್ ಚಪ್ಪರಬಂದ್, ಮೌಲಾನಾ ಇಬ್ರಾಹಿಂ ಚೌಧರಿ ಸಾನ್ನಿಧ್ಯ ವಹಿಸಿದ್ದರು.
ಸಿಂದಗಿಯ ಅಂಜುಮನ್ ಕಾಲೇಜಿನ ನಿವೃತ್ತ ಪ್ರಾಚಾರ್ಯ, ವಾಗ್ಮಿ ಎಂ.ಡಿ. ಬಳಗಾನೂರ ಮಾತನಾಡಿದರು.
ಆಲಮಟ್ಟಿ ಜಾಮೀಯಾ ಮಸೀದಿ ಕಮಿಟಿಯ ಅಧ್ಯಕ್ಷ ಎ.ಡಿ. ಮಕಾನದಾರ್ ಅಧ್ಯಕ್ಷತೆ ವಹಿಸಿದ್ದರು. ಸೂಪರಿಂಟೆಂಡಿಂಗ್ ಎಂಜಿನಿಯರ್ ಬಿ.ಎಸ್. ಪಾಟೀಲ, ಆರ್‌ಎಫ್‌ಒ ಮಹೇಶ ಪಾಟೀಲ, ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ಸಹಾಯಕ ಕಮಾಂಡೆಂಟ್ ಈರಪ್ಪ ವಾಲಿ, ಪ್ರಾಚಾರ್ಯ ಪಿ.ಎ. ಹೇಮಗಿರಿಮಠ, ಪಿಎಸ್‌ಐ ಎಫ್.ಎಸ್. ಇಂಡಿಕರ, ದಾವಲ್ ಮಲೀಕ್ ನದಾಫ್, ನಿಸ್ಸಾರ್ ಪಿಂಜಾರ್, ರಾಯನಗೌಡ ಕರಿಗೌಡರ, ಎಂ.ಆರ್. ಕಮತಗಿ, ಯುಸೂಫ್ ಜೈನಾಪೂರ, ಇಮಾಮ್ ಸಾಬ್ ಸಾಲಿಮನಿ, ಇಸ್ಮಾಯಿಲ್ ಮುದ್ದೇಬಿಹಾಳ, ರಾಜಾ ಅಹ್ಮದ್ ಹಾದಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

